ನವದೆಹಲಿ: ಸರ್ಕಾರವು ತನ್ನ 'ಒಂದು ದೇಶ, ಒಂದು ಚುನಾವಣೆ' ಯೋಜನೆಯ ಜಾರಿಗೆ ತರಲು ಪ್ರಸ್ತಾಪಿಸಿರುವ ಮಸೂದೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲು ಉತ್ಸುಕವಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಪ್ರಸ್ತಾವಿತ ಮಸೂದೆಗಳನ್ನು ಕೇಂದ್ರ ಸಚಿವ ಸಂಪುಟ ಇನ್ನೂ ಅನುಮೋದಿಸಿಲ್ಲವಾದರೂ, ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅದನ್ನು ಮಂಡಿಸುವ ಸಾಧ್ಯತೆಯಿದೆ.
ಸಂಸತ್ತಿನಲ್ಲಿ ಮಸೂದೆಗಳನ್ನು ಮಂಡಿಸಿದ ನಂತರ, ಸರ್ಕಾರವು ವಿಸ್ತೃತ ಚರ್ಚೆಗಾಗಿ ಎರಡು ಸದನಗಳ ಜಂಟಿ ಸಮಿತಿಯ ಮುಂದಿಡಲು ಬಯಸುತ್ತದೆ ಎಂದು ಮೂಲಗಳು ಹೇಳಿವೆ. ಸಮಿತಿಯ ಮೂಲಕ ವಿವಿಧ ರಾಜ್ಯಗಳ ವಿಧಾನಸಭೆಗಳ ಸ್ಪೀಕರ್‌ಗಳ ಜತೆ ಸಮಾಲೋಚನೆ ನಡೆಸುವ ಯೋಜನೆಯನ್ನೂ ರೂಪಿಸಿದೆ.
'ಒಂದು ದೇಶ-ಒಂದು ಚುನಾವಣೆ' ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ಸೆಪ್ಟೆಂಬರ್‌ನಲ್ಲಿ ಹೇಳಿದ್ದವು. ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಎರಡು ಮಸೂದೆಗಳೂ ಇದರಲ್ಲಿ ಸೇರಿವೆ.