ಸ್ಯಾನ್ ಫ್ರಾನ್ಸಿಸ್ಕೊ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿ, ಉಭಯ ರಾಷ್ಟ್ರಗಳ ರಕ್ಷಣಾ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ಕುರಿತು ವಿಸ್ತೃತ ಚರ್ಚೆ ನಡೆಸಿದರು.
'ಈಗಿನ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು' ಎಂದು ಜೈಶಂಕರ್ ಗುರುವಾರ 'ಎಕ್ಸ್'ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿರುವ ಜೈಶಂಕರ್ ಅವರು, ಅಲ್ಲಿನ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಹಾಗೂ ನಿರ್ಗಮಿಸಲಿರುವ ಬೈಡನ್ ಆಡಳಿತದ ಇನ್ನಿತರ ಸಚಿವರನ್ನು ಭೇಟಿಯಾಗಲಿದ್ದಾರೆ. ಮುಂಬರುವ ಟ್ರಂಪ್ ಆಡಳಿತದ ಹಿರಿಯ ನಾಯಕರರೊಂದಿಗೂ ಅವರು ಔಪಚಾರಿಕ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ.
ಜೈಶಂಕರ್ ಅವರು ಅಮೆರಿಕದಲ್ಲಿ ನಡೆಯುತ್ತಿರುವ ಭಾರತದ ಕಾನ್ಸುಲ್ ಜನರಲ್‌ಗಳ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಮ್ಮೇಳನ ಡಿ.24ರಿಂದ ಆರಂಭವಾಗಿದ್ದು, 29ರವರೆಗೆ ನಡೆಯಲಿದೆ.