ರಾಜಗಢ, ಮಧ್ಯಪ್ರದೇಶ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿನ (ಎನ್‌ಐಸಿಯು) 10ರಿಂದ 15 ಅಡಿ ಉದ್ದದ ಆಮ್ಲಜನಕ ಪೈಪ್‌ಗಳನ್ನು ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿದ್ದರಿಂದ ಘಟಕದಲ್ಲಿದ್ದ 12 ಶಿಶುಗಳಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದ ಘಟನೆ ನಡೆದಿದೆ.
'ಮಂಗಳವಾರ ತಡರಾತ್ರಿ ಕಳ್ಳತನ ನಡೆದಿತ್ತು. ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿದ್ದ ಶಿಶುಗಳು ಜೋರಾಗಿ ಚೀರಲು ಆರಂಭಿಸಿದ್ದವು' ಎಂದು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದರು.
'ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದಂತೆಯೇ, ತೀವ್ರ ನಿಗಾ ಘಟಕದಲ್ಲಿ ಅಳವಡಿಸಲಾಗಿದ್ದ ಅಲರಾಂ ವ್ಯವಸ್ಥೆಯು ಶಬ್ದ ಮಾಡಲು ಆರಂಭಿಸಿತು. ಇದರಿಂದ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ, ತುರ್ತು ಪರಿಸ್ಥಿತಿಯಲ್ಲಿ ಬಳಸುವ ದೊಡ್ಡ ದೊಡ್ಡ ಆಮ್ಲಜನಕ ಸಿಲಿಂಡರ್‌ಗಳನ್ನು ತಕ್ಷಣದಲ್ಲಿಯೇ ತೀವ್ರ ನಿಗಾ ಘಟಕದಲ್ಲಿ ಅಳವಡಿಸಿ ದುರಂತವನ್ನು ತಪ್ಪಿಸಿದರು' ಎಂದರು.
'ಘಟಕದಲ್ಲಿ ಒಟ್ಟು 20 ನವಜಾತ ಶಿಶುಗಳಿದ್ದವು. ಇವುಗಳಲ್ಲಿ 12 ಶಿಶುಗಳಿಗೆ ಆಮ್ಲಜನಕ ಒದಗಿಸಬೇಕಾದ ಅಗತ್ಯವಿತ್ತು. ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ' ಎಂದರು.