ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕಾರ್ಯಕಾರಿ ಮಂಡಳಿಯಲ್ಲಿ ಶಿಕ್ಷಕರಿಗಾಗಿ ಮೀಸಲಿದ್ದ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಇದೇ ಮೊದಲ ಬಾರಿಗೆ ಮಹಿಳೆಯರೇ ಗೆಲುವು ಸಾಧಿಸಿದ್ದಾರೆ ಎಂದು ಶಿಕ್ಷಕರ ಸಂಘಟನೆ ಜೆಎನ್‌ಯುಟಿಎ ಗುರುವಾರ ತಿಳಿಸಿದೆ.
ಇದಕ್ಕೂ ಮುನ್ನ ಒಬ್ಬರು ಅಥವಾ ಇಬ್ಬರು ಮಹಿಳಾ ಪ್ರತಿನಿಧಿಗಳು ಮಾತ್ರ ಇರುತ್ತಿದ್ದರು ಎಂದು ಅದು ತಿಳಿಸಿದೆ.
'ಮೂರೂ ಸ್ಥಾನಗಳಲ್ಲಿ ಮಹಿಳೆಯರು ಗೆಲುವು ಸಾಧಿಸಿರುವುದು ಇದೇ ಮೊದಲು' ಎಂದು ಸಂಘಟನೆಯ ಸದಸ್ಯರೊಬ್ಬರು ಹೇಳಿದರು.
ಚಿರಶ್ರೀ ದಾಸ್ ಗುಪ್ತಾ, ವೀಣಾ ಹರಿಹರನ್ ಮತ್ತು ಸಂತಾನಾ ಖಾನಿಕರ್ ಗೆಲುವು ಸಾಧಿಸಿರುವ ಪ್ರತಿನಿಧಿಗಳು.
ಗುಪ್ತಾ ಅವರು ಪ್ರಾಧ್ಯಾಪಕ ವಿಭಾಗದಲ್ಲಿ 141 ಮತಗಳನ್ನು ಪಡೆದಿದ್ದಾರೆ. ಹರಿಹರನ್ ಅವರು ಸಹ ಪ್ರಾಧ್ಯಾಪಕ ವಿಭಾಗದಲ್ಲಿ 84 ಮತಗಳನ್ನು ಮತ್ತು ಖಾನಿಕರ್ ಅವರು ಸಹಾಯಕ ಪ್ರಾಧ್ಯಾಪಕ ವಿಭಾಗದಲ್ಲಿ 121 ಮತಗಳನ್ನು ಪಡೆದಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಡಿಸೆಂಬರ್ 9ರಂದು ಚುನಾವಣೆ ನಡೆದಿತ್ತು. 634 ಮಂದಿ ಸಿಬ್ಬಂದಿ ಸದಸ್ಯರು ಮತ ಚಲಾಯಿಸಿದ್ದರು.