ಕಾಸರಗೋಡು: ಹತ್ಯಾಯತ್ನ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಪ್ಪಳ ಕೈಕಂಬ ಬಂಗ್ಲಾ ಕಂಪೌಂಡ್ ನಿವಾಸಿ ಆದಂಖಾನ್ ಎಂಬಾತನನ್ನು ಆತನ ಮನೆ ಸುತ್ತುವರಿದು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್‍ಪಿ ಸಿ.ಕೆ ಸುನಿಲ್‍ಕುಮಾರ್ ನಿರ್ದೇಶನದನ್ವಯ ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಅನೂಪ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಮಂಜೇಶ್ವರದಲ್ಲಿ ನಡೆದ ಹತ್ಯಾಯತ್ನ ಪ್ರಕರಣದಲ್ಲಿ 2020ರಲ್ಲಿ ಈತನನ್ನು ಬಂಧಿಸಲಾಗಿದ್ದು, ಕೋವಿಡ್ ಕಾಲವಧಿಯಲ್ಲಿ ಕಾಞಂಗಾಡಿನ ಜಿಲ್ಲಾಸ್ಪತ್ರೆಯ ಎರಡನೇ ಮಹಡಿಯ ಕ್ವಾರಂಟೈನ್ ಕೊಠಡಿಯ ಕಿಟಿಕಿ ಮೂಲಕ ಜಿಗಿದು ಪರಾರಿಯಾಗಿದ್ದನು. ನಂತರ ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಈತನ ವಿರುದ್ಧ ಹತ್ಯಾಯತ್ನ, ಕಳವು, ಮಾದಕ ವಸ್ತು ಸಾಗಾಟ ಸೇರಿದಂತೆ ಹಲವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಳ ಕೈಕಂಬದ ಮನೆಗೆ ಈತ ತಲುಪಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ದಾಳಿ ನಡೆಸಿ ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.