ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಉಗ್ರರ ದಾಳಿಯಲ್ಲಿ ಕನಿಷ್ಠ ಮೂವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಡುಕಿ ಜಿಲ್ಲೆಯ ಕಲ್ಲಿದ್ದಲು ಗಣಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, ಇಬ್ಬರು ಫ್ರಂಟಿಯರ್ ಕಾರ್ಪ್ಸ್ ಯೋಧರು ಹುತಾತ್ಮರಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸರ್ದಾರ್ ರಿಂಡ್ ಹೇಳಿದ್ದಾರೆ.
ರಾಕೆಟ್‌ಗಳು, ಗ್ರೆನೇಡ್‌ಗಳು ಮತ್ತು ಭಾರಿ ಶಸ್ತ್ರಾಸ್ತ್ರಗಳನ್ನು ಬಳಸುವ ಮೂಲಕ ಉಗ್ರರು ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಕೆಲವು ಉಗ್ರರು ಹತರಾಗಿದ್ದಾರೆ. ಆದರೆ, ಎಷ್ಟು ಮಂದಿ ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬ ಬಗ್ಗೆ ನಿಖರವಾದ ಸಂಖ್ಯೆ ಧೃಢೀಕರಿಸಲ್ಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಗ್ವಾದರ್‌ನ ಜಿವಾನಿ ಪಟ್ಟಣದಲ್ಲಿ ಪಾಕಿಸ್ತಾನದ ಕೋಸ್ಟ್ ಗಾರ್ಡ್‌ನಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿದ ಉಗ್ರರು ದಾರನ್ ಪ್ರದೇಶದ ಲೈಟ್‌ಹೌಸ್ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಿಡಿಸಿದ್ದಾರೆ. ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.