ಢಾಕಾ: ಬಾಂಗ್ಲಾದೇಶದ ಸುನಾಮ್‌ಗಂಜ್ ಜಿಲ್ಲೆಯಲ್ಲಿ ಹಿಂದೂಗಳ ಮನೆಗಳು, ಅಂಗಡಿಗಳು ಮತ್ತು ಲೋಕನಾಥ ದೇವಸ್ಥಾನವನ್ನು ಧ್ವಂಸಗೊಳಿಸಿದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಘಟನೆ ಸಂಬಂಧ 150ರಿಂದ 170 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲಿಮ್ ಹುಸೇನ್ (19), ಸುಲ್ತಾನ್ ಅಹಮದ್ ರಾಜು (20), ಇಮ್ರಾನ್ ಹುಸೇನ್ (31) ಮತ್ತು ಶಜಹಾನ್ ಹುಸೇನ್ (20) ಅವರನ್ನು ದೋರಾಬಜಾರ್ ಪ್ರದೇಶದ ಧ್ವಂಸ ಪ್ರಕರಣ ಸಂಬಂಧ ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿ.3ರಂದು ಸುನಾಮ್‌ಗಂಜ್ ಜಿಲ್ಲೆಯ ನಿವಾಸಿ ಆಕಾಶ್ ದಾಸ್ ಎಂಬವರು ಹಾಕಿದ್ದ ಪೋಸ್ಟ್‌ನಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆತ ತನ್ನ ಪೋಸ್ಟ್ ಅಳಿಸಿ ಹಾಕಿದ್ದರೂ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ಹರಡಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಬಿಎಸ್‌ಎಸ್ ತಿಳಿಸಿದೆ.
ಸ್ಥಳೀಯ ಪೊಲೀಸರು ದಾಸ್ ಅವರನ್ನು ತಕ್ಷಣ ಬಂಧಿಸಿ ಸುರಕ್ಷತೆ ಹಿತದೃಷ್ಟಿಯಿಂದ ಮತ್ತೊಂದು ಠಾಣೆಗೆ ಸ್ಥಳಾಂತರಿಸಿದ್ದರು. ಅದೇ ದಿನ ಉದ್ರಿಕ್ತ ಜನರು ಹಿಂದೂಗಳ ಮನೆ, ಅಂಗಡಿಗಳು ಮತ್ತು ಲೋಕನಾಥ ದೇವಸ್ಥಾನವನ್ನು ಧ್ವಂಸಗೊಳಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ, ಜಿಲ್ಲಾಧಿಕಾರಿ ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 88 ಕೋಮು ಗಲಭೆಗಳು ನಡೆದಿವೆ. ಈ ಪ್ರಕರಣಗಳ ಸಂಬಂಧ 70 ಜನರನ್ನು ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿರುವ ಮೊಹಮ್ಮದ್ ಯೂನುಸ್ ಅವರ ಮಾಧ್ಯಮ ಕಾರ್ಯದರ್ಶಿ ಶಫೀಕುಲ್ ಆಲಮ್ ತಿಳಿಸಿದ್ದಾರೆ