ಮುಂಬೈ: ಭಾನುವಾರ ವಿಸ್ತರಣೆಗೊಂಡ ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಸಚಿವ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ಬೇಸರಗೊಂಡಿರುವ ಶಿವಸೇನಾ ಶಾಸಕ ನರೇಂದ್ರ ಭೊಂಡೇರ್ಕರ್ ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಯಾಗಿರುವ ಏಕನಾಥ ಶಿಂದೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು ಎಂದು ಈಶಾನ್ಯ ವಿದರ್ಭ ಜಿಲ್ಲೆಗಳ ಶಿವಸೇನಾ ಪಕ್ಷದ ಉಪಾಧ್ಯಕ್ಷರಾಗಿದ್ದ ಭಂಡೋರ್ಕರ್ ತಮ್ಮ ಕ್ಷೇತ್ರ ಭಂಡಾರ ಕ್ಷೇತ್ರದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ.
ನನಗೆ ಸಚಿವ ಸ್ಥಾನ ನೀಡುವುದಾಗಿ ಶಿಂದೆ ಭರವಸೆ ನೀಡಿದ್ದರಿಂದಲೇ ಶಿವಸೇನಾ ಸೇರಿದ್ದೆ. ಶಿಂದೆ ಮುಖ್ಯಮಂತ್ರಿಯಾಗಿದ್ದಾಗ ಪಕ್ಷೇತರ ಶಾಸಕನಾಗಿದ್ದ ನಾನು, ಅವರಿಗೆ ಬೆಂಬಲ ಸೂಚಿಸಿದ್ದೆ. ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುದನ್ನು ಗಮನಿಸಿದೆ. ಹಾಗಾಗಿ, ಪಕ್ಷ ಬಿಡುವ ನಿರ್ಧಾರ ಕೈಗೊಂಡೆ ಎಂದಿದ್ದಾರೆ.
ಭಂಡಾರ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದು ನನ್ನ ಧ್ಯೇಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಭಂಡಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿಯನ್ನು 38,000 ಮತಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದರು.
ಮಹಾರಾಷ್ಟ್ರದ ಮೊದಲ ಸಚಿವ ಸಂಪುಟ ವಿಸ್ತರಣೆಯಲ್ಲಿ 39 ಮಂದಿ ಶಾಸಕರು ಸಚಿವರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ 19 ಸಚಿವ ಸ್ಥಾನ ಸಿಕ್ಕಿರೆ, ಮಿತ್ರಪಕ್ಷಗಳಾದ ಶಿಂದೆ ನೇತೃತ್ವದ ಶಿವಸೇನಾ ಮತ್ತು ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಕ್ರಮವಾಗಿ 11 ಮತ್ತು 9 ಸಚಿವ ಸ್ಥಾನಗಳು ಸಿಕ್ಕಿವೆ.