ಅಳಪ್ಪುಳ : ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಗೆ ಕೇಂದ್ರ ಸರ್ಕಾರವು ಸೂಕ್ತ ಜಾಗ ಗುರುತಿಸದಿರುವ ಹಿಂದೆ 'ರಹಸ್ಯ ಕಾರ್ಯಸೂಚಿ' ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ.
'ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಸ್ಮಾರಕ ನಿರ್ಮಿಸುವುದು ಪದ್ಧತಿ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.
'ಕಾಂಗ್ರೆಸ್ ಮಾತ್ರವಲ್ಲದೆ ಶಿರೋಮಣಿ ಅಕಾಲಿ ದಳವು ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಪ್ರಧಾನಿ ಹುದ್ದೆಗೇರಿದ ಸಿಖ್ ಸಮುದಾಯದ ಏಕೈಕ ನಾಯಕನಿಗೆ ಕೇಂದ್ರ ಸರ್ಕಾರ ಯಾಕೆ ಅಗೌರವ ತೋರುತ್ತಿದೆ' ಎಂದು ಪ್ರಶ್ನಿಸಿರುವ ವೇಣುಗೋಪಾಲ್, ಕೇಂದ್ರದ ಹೀನ ವರ್ತನೆ ಮತ್ತು ಲೋಪಗಳ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದಿದ್ದಾರೆ.
'ಅಂತಿಮ ವಿಧಿವಿಧಾನಗಳ ಬಗ್ಗೆ ಸಿಂಗ್ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಸಿಂಗ್ ಹತ್ತಿರದ ಸಂಬಂಧಿಗಳಿಗೂ ಆಸನದ ವ್ಯವಸ್ಥೆ ಮಾಡಿರಲಿಲ್ಲ. ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡದೇ ಕೇಂದ್ರವು ಮಾಜಿ ಪ್ರಧಾನಿಯೊಬ್ಬರ ಕೀರ್ತಿಗೆ ಮಸಿ ಬಳಿದಿದೆ' ಎಂದು ಟೀಕಿಸಿದ್ದಾರೆ.
ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆಗೆ ಸರ್ಕಾರವು ನಿಗಮ್ ಬೋಧ್ ಘಾಟ್‌ನಲ್ಲಿ ಸ್ಥಳ ನಿಗದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ಆರೋಪ-ಪ್ರತ್ಯಾರೋಪಗಳು ಭಾನುವಾರವೂ ಮುಂದುವರಿದಿತ್ತು.