ಪಟ್ನಾ: ಪೂರ್ವಭಾವಿ ಪರೀಕ್ಷೆಯ ನಿಯಮಗಳಿಗೆ ತಂದಿರುವ ಬದಲಾವಣೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಪಟ್ನಾದ ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಗುಂಪನ್ನು ಚದುರಿಸಲು ಪೊಲೀಸರು ಶುಕ್ರವಾರ ಲಾಠಿ ಪ್ರಹಾರ ನಡೆಸಿದರು.
'ಕಚೇರಿಗೆ ಮುತ್ತಿಗೆ ಹಾಕಲು ಬಿಪಿಎಸ್‌ಸಿ ಆಕಾಂಕ್ಷಿಗಳ ದೊಡ್ಡ ಗುಂಪು ನಗರದ ಬೈಲಿ ರಸ್ತೆಯಲ್ಲಿ ಸೇರಿದೆ' ಎಂದು ಎಸ್‌ಎಸ್‌ಪಿ ರಾಜೀವ್ ಮಿಶ್ರಾ ತಿಳಿಸಿದರು.
'ಬಿಪಿಎಸ್‌ಸಿ ಕಚೇರಿಯತ್ತ ಮುನ್ನುಗ್ಗುವುದನ್ನು ಪೊಲೀಸರು ತಡೆದಾಗ, ಪ್ರತಿಭಟನೆಯಲ್ಲಿ ನಿರತರಾದವರು ರಸ್ತೆಯಲ್ಲೇ ಕುಳಿತರು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸ್ಥಳದಿಂದ ತೆರಳುವಂತೆ ಪೊಲೀಸರು ಪದೇ ಪದೇ ಮನವಿ ಮಾಡಿದರೂ, ಅಲ್ಲಿಂದ ಕದಲಲಿಲ್ಲ. ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲಾಯಿತು' ಎಂದರು.
ಲಾಠಿ ಪ್ರಹಾರದಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಆದರೆ, ಮಿಶ್ರಾ ಅವರು ಆರೋಪವನ್ನು ತಳ್ಳಿಹಾಕಿದ್ದಾರೆ.
ಪೂರ್ವಭಾವಿ ಪರೀಕ್ಷೆಯ ನಿಯಮಗಳಿಗೆ ಯಾವುದೇ ಬದಲಾವಣೆ ತಂದಿಲ್ಲ ಎಂದು ಬಿಪಿಎಸ್‌ಸಿ ಸ್ಪಷ್ಟಪಡಿಸಿದೆ. 70ನೇ ಬಿಪಿಎಸ್‌ಸಿ ಕಂಬೈನ್ಡ್ (ಪೂರ್ವಭಾವಿ) ಪರೀಕ್ಷೆ ಡಿಸೆಂಬರ್ 13ರಂದು ನಡೆಯಲಿದೆ. ರಾಜ್ಯದಾದ್ಯಂತ 925 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು ಐದು ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.