ಬೀಜಿಂಗ್: ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ಸುಧಾರಿಸಲು ಹಾಗೂ ಗಡಿಯಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಉತ್ತಮಪಡಿಸಲು ಅಕ್ಟೋಬರ್‌ನಲ್ಲಿ ಮಾಡಿಕೊಂಡ ಒಪ್ಪಂದವನ್ನು ಕಾರ್ಯಗತಗೊಳಿಸುವ ಮುಂದುವರಿದ ಪ್ರಕ್ರಿಯೆಗೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಚೀನಾ ಭಾರತ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯತೆಯ ಕಾರ್ಯಾಚರಣೆ ವಿಧಾನ (WMCC) 32ನೇ ಸಭೆಯ ನವದಹೆಲಿಯಲ್ಲಿ ಗುರುವಾರ ನಡೆಯಿತು. ಸೇನೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಸ್ಪರ ಸಂವಹನ ನಡೆಸಿ, ಗಡಿ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದಿದೆ.
ಉಭಯ ರಾಷ್ಟ್ರಗಳ ನಡುವೆ ಅ. 21ರ ಒಪ್ಪಂದದ ನಂತರ WMCC ಮೊದಲ ಸಭೆ ಇದಾಗಿದೆ. ಇದರಿಂದಾಗಿ ನಾಲ್ಕು ವರ್ಷಗಳ ಸೇನಾ ಸಂಘರ್ಷಕ್ಕೆ ಈ ಸಭೆ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಜಟಾಪಟಿಗೆ ವಿರಾಮ ಬಿದ್ದಿದೆ. ಇದೇ ವಿಷಯವಾಗಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಬೇಕಿದೆ ಎಂದು ಮೂಲಗಳು ಹೇಳಿವೆ.
ಮಾತುಕತೆ ಮೂಲಕವೇ ಪೂರ್ವ ಲಡಾಕ್‌ನ ಗಡಿಯಲ್ಲಿ ಭವಿಷ್ಯದಲ್ಲಿ ಜಟಾಪಟಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ.
2020ರ ಮೇಯಿಂದ ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್‌ನ ಗಡಿಯಲ್ಲಿ ಸಂಘರ್ಷ ಉಂಟಗಿತ್ತು. ಗಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಸೇನಾ ಸಂಘರ್ಷದಿಂದಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿತ್ತು. ಗಡಿಯಲ್ಲಿನ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದ್ದರು. ಇದು ಅಂತಿಮ ಹಂತ ತಲುಪಿದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರು ಬ್ರಿಕ್ಸ್ ಸಮಾವೇಶದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.