ಫಿನೀಕ್ಸ್: ಹೊಸ ಆಡಳಿತದಲ್ಲಿ ಪನಾಮ ಕಾಲುವೆಯ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಿಳಿಸಿದರು.
ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳನ್ನು ಸಂಪರ್ಕಿಸುವ ಪ್ರಮುಖ ಸಾರಿಗೆ ಮಾರ್ಗವಾದ ಈ ಕಾಲುವೆಯನ್ನು ಮಧ್ಯ ಅಮೆರಿಕದ ಮಿತ್ರರಿಗೆ 'ಮೂರ್ಖತನ'ದಿಂದ ಬಿಟ್ಟುಕೊಡಲಾಗಿದೆ.
ಇದರಿಂದಾಗಿ ಇಲ್ಲಿ ಸಾಗುವ ಹಡಗುಗಳು 'ಅಸಮಂಜಸವಾದ' ಶುಲ್ಕ ಪಾವತಿಸುವಂತಾಗಿದೆ ಎಂದರು.
ಅರಿಜೋನಾದಲ್ಲಿ ನಡೆದ 'ಅಮೆರಿಕಾ ಫೆಸ್ಟ್'ನಲ್ಲಿ ಮಾತನಾಡಿದ ಟ್ರಂಪ್, 'ನನ್ನ ಕನಸಿನ ಸಚಿವ ಸಂಪುಟವು ದೇಶದ ಆರ್ಥಿಕತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಿದೆ' ಎಂದು ಹೇಳಿದರು.
'ಅಮೆರಿಕದ ಸುವರ್ಣ ಯುಗ ಆರಂಭವಾಗಲಿದೆ. ನುಸುಳುಕೋರರು, ಅಕ್ರಮ ವಲಸಿಗರಿಗೆ ಗಡಿಗಳನ್ನು ಮುಚ್ಚಲಾಗುವುದು. ಗಾಜಾ ಹಾಗೂ ಉಕ್ರೇನ್‌ನಲ್ಲಿ ನಡೆದಿರುವ ಯುದ್ಧಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುತ್ತೇವೆ' ಎಂದು ನಿಯೋಜಿತ ಅಧ್ಯಕ್ಷರು ಪುನರುಚ್ಚರಿಸಿದರು.