ಬದಿಯಡ್ಕ: ಕಾರ್ಮಾರು ಕ್ಷೇತ್ರಕ್ಕೆ ಸನಾತನ ಧರ್ಮೀಯರ ಒಲವು ನಿರಂತರ ಹರಿದು ಬರಲಿ. ಗ್ರಾಮೀಣ ಪ್ರದೇಶದಲ್ಲಿ ಕಾರಣಿಕವಾದ ದೇವಸ್ಥಾನದ ಪುನರುದ್ಧಾರಕ್ಕೆ ಪಣತೊಟ್ಟ ಬಂಧುಗಳು ನಿಜವಾಗಿಯೂ ಅಭಿನಂದನಾರ್ಹರು. ಬಲು ಸುಂದರವಾಗಿ ಮೂಡಿಬರುತ್ತಿರುವ ಕೃಷ್ಣನ ಕ್ಷೇತ್ರಕ್ಕೆ ಭಗವದ್ಭಕ್ತರ ದಂಡೇ ಹರಿದುಬರುವಂತಾಗಲಿ ಎಂದು ಕೊಡುಗೈದಾನಿ, ಉದ್ಯಮಿ ಶಿವಶಂಕರ ನೆಕ್ರಾಜೆ ಹೇಳಿದರು.
ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವದ ಧನಸಂಗ್ರಹಕ್ಕಾಗಿ ಶ್ರೀ ಮಹಾವಿಷ್ಣು ಯುವಕ ವೃಂದದ ಆಶ್ರಯದಲ್ಲಿ ಹಮ್ಮಿಕೊಂಡ `ಶ್ರೀಭಾಗ್ಯ' ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಶ್ರದ್ಧಾಕೇಂದ್ರಗಳು ಹಾಗೂ ಅದಕ್ಕೆ ಸಂಬಂಧಿಸಿದ ಸೊತ್ತುಗಳ ರಕ್ಷಣೆಗೆ ಆದ್ಯತೆಯನ್ನು ನೀಡಬೇಕು ಎಂಬ ಕಿವಿಮಾತನ್ನು ಹೇಳಿದರು. ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಶಕ್ತಿಮೀರಿ ಪ್ರಯತ್ನಿಸಬೇಕು. ಊರಿನ ದೇವಾಲಯದಲ್ಲಿ ಸೇವೆಯನ್ನು ಮಾಡುವ ಮೂಲಕ ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜನಪ್ರತಿನಿಧಿ ಶ್ಯಾಮ ಪ್ರಸಾದ್ ಕೆ ಮಾನ್ಯ, ಕಾರ್ಯಾಧ್ಯಕ್ಷ ರಾಮ ಕೆ, ಉದ್ಯಮಿ ಸಂತೋಷ್ ಕುಮಾರ್ ಎಸ್., ಗೋಪಾಲ ಭಟ್ ಪಿ ಎಸ್., ಕ್ಷೇತ್ರದ ಅರ್ಚಕ ಕೃಷ್ಣ ಪ್ರಸಾದ್ ಬೆಂಗ್ರೋಡಿ, ಯುವಕ ವೃಂದದ ಕಾರ್ಯದರ್ಶಿ ಗೋಕುಲ ಶರ್ಮ, ಕೋಶಾಧಿಕಾರಿ ರಾಜೇಶ್ ಕಾರ್ಮಾರು, ಪುರುಷೋತ್ತಮ ಕಾರ್ಮಾರು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ರಂಜಿತ್ ಯಾದವ್ ವಂದಿಸಿದರು. ಉಪಾಧ್ಯಕ್ಷ ಸುಂದರ ಶೆಟ್ಟಿ ನಿರೂಪಿಸಿದರು.