ಚಟ್ನಿ ರೆಸಿಪಿಗಳಲ್ಲಿ ನಾವು ಈ ಹಿಂದೆಯೆ ಬಹಳಷ್ಟು ತರಕಾರಿ ಚಟ್ನಿ ಮಾಡುವ ಕುರಿತು ತಿಳಿಸಿದ್ದೇವೆ. ಹಾಗೆ ಎಲ್ಲಾ ಚಟ್ನಿಗಳು ಕೂಡ ಅದ್ಭುತ ರುಚಿಗೆ ಹೆಸರಾಗಿವೆ. ತರಕಾರಿಗಳ ಚಟ್ನಿ ಎಲ್ಲಾ ಬಗೆಯ ತಿಂಡಿ, ಊಟಕ್ಕೂ ಕೂಡ ರುಚಿಯಾಗಿರುತ್ತೆ. ನೀವು ಯಾವುದೇ ತಿಂಡಿ ಮಾಡಿದ್ರೂ ಅದಕ್ಕೆ ಒಂದು ಚಟ್ನಿ ಮಾಡಿದರೆ ಮಾತ್ರವೇ ಅದರ ರುಚಿ ದುಪ್ಪಟ್ಟಾಗುವುದು. ಹೀಗಾಗಿ ತರಕಾರಿ ಚಟ್ನಿ ಮಾಡುವುದು ಎಲ್ಲರ ಮನೆಯಲ್ಲೂ ಕಾಮನ್.
ಹಾಗೆ ನಾವಿಂದು ತರಕಾರಿಗಳಲ್ಲಿ ಅತ್ಯಧಿಕ ಆರೋಗ್ಯಕರ ಅಂಶ ಹೊಂದಿರುವ ಈ ಬೀಟ್ರೂಟ್ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಬೀಟ್ರೂಟ್ ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದು ನಿಮಗೆ ತಿಳಿದಿರಬಹುದು. ಹಾಗೆ ಬೀಟ್ರೂಟ್‌ನ ಸಾಂಬಾರ್ ಹಾಗೂ ಪಲ್ಯ ಅದ್ಭುತ ರುಚಿ ನೀಡುತ್ತೆ. ಊಟದ ಜೊತೆಗೆ ಈ ಬೀಟ್ರೂಟ್ ಪಲ್ಯ ಇದ್ದರೆ ಮತ್ತೇನು ಬೇಡ.
ಆದ್ರೆ ನಾವಿಂದು ಬೆಳಗ್ಗೆ ತಿಂಡಿಗೆ ಹಾಗೂ ಊಟದ ಸಮಯದಲ್ಲಿ ಸವಿಯಲು ಬೀಟ್ರೂಟ್‌ನಿಂದ ಮಾಡಿರುವ ಚಟ್ನಿಯ ಕುರಿತು ತಿಳಿಯೋಣ. ಈ ಬೀಟ್ರೂಟ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬೀಟ್ರೂಟ್ ಚಟ್ನಿ ಮಾಡುವ ವಿಧಾನವೇನು? ಈ ಚಟ್ನಿ ಮಾಡಲು ಎಷ್ಟು ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೀಟ್ರೂಟ್ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಬೀಟ್ರೂಟ್ - 1
- ಒಣ ಮೆಣಸು
- ಈರುಳ್ಳಿ - 2
- ಹುಣಸೆಹಣ್ಣು
- ಬೆಳ್ಳುಳ್ಳಿ-1
- ಶುಂಠಿ
- ಕೊತ್ತಂಬರಿ ಸೊಪ್ಪು
- ಕಡಲೆ ಬೇಳೆ
- ಉದ್ದಿನಬೇಳೆ
- ಸಾಸಿವೆ
- ಜೀರಿಗೆ
- ಕರಿಬೇವಿನ ಎಲೆಗಳು
- ತೆಂಗಿನಕಾಯಿ ತುರಿ
- ಎಣ್ಣೆ
- ರುಚಿಗೆ ಉಪ್ಪು
ಬೀಟ್ರೂಟ್ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿ ಬಳಿಕ ಇದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ, ಅನಂತರ ಇದಕ್ಕೆ ಜೀರಿಗೆ, ಒಣ ಮೆಣಸು ಕೂಡ ಹಾಕಿ. ಬಳಿಕ ಬೆಳ್ಳುಳ್ಳಿ, ಈರುಳ್ಳಿ ಕೂಡ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹಾಗೆ ಒಂದು ಸಣ್ಣ ಶುಂಠಿ ತುಂಡು ಕೂಡ ಹಾಕಿ.
ಈಗ ಬೀಟ್ರೂಟ್ ಅನ್ನು ತೊಳೆದು ತುರಿದುಕೊಂಡು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಹಾಗೆ ಉಪ್ಪು ಕೂಡ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. 3 ನಿಮಿಷದ ಬಳಿಕ ಇದಕ್ಕೆ ತೆಂಗಿನ ಕಾಯಿ ತುರಿ, ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಕಲಸಿಕೊಳ್ಳಿ. 1 ನಿಮಿಷ ಪ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿಕೊಳ್ಳಿ.
ಈಗ ಈ ಅಂಶಗಳೆಲ್ಲ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ಪದಾರ್ಥ ಹಾಕಿ. ಸ್ವಲ್ಪವೇ ಸ್ವಲ್ಪ ನೀರು ಕೂಡ ಇದಕ್ಕೆ ಹಾಕಿಕೊಂಡು ರುಬ್ಬಿಕೊಳ್ಳಿ. ನಿಮಗೆ ಯಾವ ಹದದಲ್ಲಿ ಬೇಕೋ ಅಷ್ಟು ನೀರು ಹಾಕಿಕೊಂಡು ರುಬ್ಬಬಹುದು. ಕಡಿಮೆ ನೀರು ಬಳಸಿದರೆ ರುಚಿ ಚೆನ್ನಾಗಿರುತ್ತದೆ.
ಹೀಗೆ ರುಬ್ಬಿಕೊಂಡಿರುವ ಈ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಂಡು ಸಣ್ಣ ಒಗ್ಗರಣೆ ನೀಡಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಇದಕ್ಕೆ ಹಾಕಿಕೊಳ್ಳಿ. ಇಷ್ಟಾದರೆ ತಿಂಡಿ, ಊಟಕ್ಕೆ ಅದ್ಭುತ ರುಚಿಯ ಬೀಟ್ರೂಟ್ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.