ನವದೆಹಲಿ(PTI): 'ಮುಸ್ಲಿಂ ಸಮುದಾಯಕ್ಕೆ ಸೇರಿರುವ ಪೂಜಾ ಸ್ಥಳಗಳಿಗೆ ಸಂಬಂಧಿಸಿ, 2019ರ ಜನವರಿಯಿಂದ ಈ ವರ್ಷದ ನವೆಂಬರ್ ವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಮೀಕ್ಷೆ ನಡೆಸಿದೆ. ಈ ಸ್ಥಳಗಳಿಗೆ ಸಂಬಂಧಪಟ್ಟಂತೆ, ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಕ್ಕೆ ಎಎಸ್‌ಐ ಬದ್ಧವಾಗಿದೆ' ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರ ಪ್ರಶ್ನೆಗೆ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ಮಾಹಿತಿ ನೀಡಿದ್ದಾರೆ.
2019ರ ಜನವರಿಯಿಂದ 2024ರ ನವೆಂಬರ್ ನಡುವೆ, ಮುಸ್ಲಿಂ ಸಮುದಾಯಕ್ಕೆ ಸೇರಿದ ಎಷ್ಟು ಪೂಜಾ ಸ್ಥಳಗಳ ಸಮೀಕ್ಷೆಯನ್ನು ಎಎಸ್‌ಐ ನಡೆಸಿದೆ ಎಂಬ ಮಾಹಿತಿ ಒದಗಿಸುವಂತೆ ಗೋಖಲೆ ಕೇಳಿದ್ದರು.
ಅಲ್ಲದೇ, 'ಎಎಸ್‌ಐ ಪ್ರಕಾರ, ಇಂತಹ ಸ್ಥಳಗಳ ಕೆಳಗೆ ಇತರ ಧರ್ಮಗಳ ಅತ್ಯಂತ ಪ್ರಾಚೀನ ಪೂಜಾ ಸ್ಥಳಗಳನ್ನು ಹೂಳಲಾಗಿತ್ತು ಎಂಬ ಬಗ್ಗೆ 'ದೃಢವಾದ ಸಾಕ್ಷ್ಯ' ಸಿಕ್ಕಿರುವಂತಹ ಸ್ಥಳಗಳು ಎಷ್ಟು ಎಂಬ ವಿವರ ನೀಡುವಂತೆಯೂ' ಕೋರಿದ್ದರು.
ಅಧ್ಯಯನ: ಭಾರತದ ಪ್ರಾಚೀನ ಸಮುದಾಯಗಳ ಮೂಲಕ್ಕೆ ಸಂಬಂಧಿಸಿ ಪರಸ್ಪರ ವಿರುದ್ಧವಾಗಿರುವ ಸಿದ್ಧಾಂತಗಳ ಕುರಿತು ಹಾಗೂ ಸಿಂಧು ಲಿಪಿಯನ್ನು ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ವಿವಿಧ ಕ್ಷೇತ್ರಗಳ ವಿದ್ವಾಂಸರಿಂದ ಪ್ರಯತ್ನ ನಡೆದಿದ್ದವು. ಆದರೆ, ಇದರಲ್ಲಿ ಯಶಸ್ಸು ಸಿಕ್ಕಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡುವಂತೆಯೂ ಸಂಸದ ಗೋಖಲೆ ಪ್ರತ್ಯೇಕ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರ ನೀಡಿರುವ ಸಚಿವ ಶೆಖಾವತ್,'ಸಚಿವಾಲಯದಡಿ ಕಾರ್ಯನಿರ್ವಹಿಸುವ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (ಐಜಿಎನ್‌ಸಿಎ) ಸ್ವಾಯತ್ತ ಸಂಸ್ಥೆಯು ಸಿಂಧು ಲಿಪಿ ಸೇರಿದಂತೆ ವಿವಿಧ ಲಿಪಿಗಳ ವಿಶ್ಲೇಷಣೆ ಕಾರ್ಯ ನಡೆಸುತ್ತದೆ. ಈ ವಿಚಾರಗಳ ಬಗ್ಗೆ ವಿದ್ವಾಂಸರ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ' ಎಂದು ಉತ್ತರಿಸಿದ್ದಾರೆ.