ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಮಧ್ಯೆಯೇ, ದೊಡ್ಡ ಸಂಖ್ಯೆಯ ಮತದಾರರ ಹೆಸರನ್ನು ಮತದಾರರ ಪಟ್ಟಿ ಯಿಂದ ತೆಗೆದುಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಶುಕ್ರವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ಶಾಹದರಾ, ಜನಕಪುರಿ, ಲಕ್ಷ್ಮಿ ನಗರ ಮತ್ತು ಇತರ ಕ್ಷೇತ್ರಗಳ ಸಾವಿರಾರು ಮತದಾರರ ಹೆಸರನ್ನು ಅಳಿಸಿಹಾಕುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಅರ್ಜಿ ಸಲ್ಲಿಸಿದೆ' ಎಂದು ಹೇಳಿದರು.
'ಶಾಹದರಾದಲ್ಲಿ 11,018 ಮತದಾರರ ಹೆಸರನ್ನು ಅಳಿಸಿಹಾಕಲು ಅರ್ಜಿ ಸಲ್ಲಿಸಿದೆ. ನಾವು ಈ ಪೈಕಿ 500 ಹೆಸರುಗಳನ್ನು ಪರಿಶೀಲಿಸಿದಾಗ ಶೇ 75ರಷ್ಟು ಜನರು ಇದೇ ಕ್ಷೇತ್ರದಲ್ಲಿ ಈಗಲೂ ನೆಲಸಿರುವುದು ಗೊತ್ತಾಗಿದೆ. ಆದರೆ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆ ಇದೆ' ಎಂದು ಅವರು ಹೇಳಿದರು.
'ಕಳೆದ ಚುನಾವಣೆಯಲ್ಲಿ ಶಾಹದರಾ ಕ್ಷೇತ್ರದಲ್ಲಿ 5,000 ಮತಗಳ ಅಂತರದಲ್ಲಿ ಎಎಪಿ ಗೆಲುವು ಸಾಧಿಸಿತ್ತು. ಈ ಬಾರಿ 11,000 ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ. ಈ ಪೈಕಿ ಬಹುತೇಕ ಮತದಾರರು ಎಎಪಿ ಬೆಂಬಲಿಗರು' ಎಂದರು.