ನವದೆಹಲಿ: ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.
ಇದೇ ವೇಳೆ ಭಾರತ-ರಷ್ಯಾ ಬಾಂಧವ್ಯ ವೃದ್ಧಿ ಹಾಗೂ ಗಟ್ಟಿಗೊಳಿಸುವಲ್ಲಿ ಮನಮೋಹನ ಸಿಂಗ್ ಅವರ ವೈಯಕ್ತಿಕ ಕೊಡುಗೆಯನ್ನು ಪುಟಿನ್ ಸ್ಮರಿಸಿದ್ದಾರೆ.
ಮನಮೋಹನ ಸಿಂಗ್ ಅತ್ಯುತ್ತಮ 'ರಾಜನೀತಿಜ್ಞ' ಎಂದು ಪುಟಿನ್ ಬಣ್ಣಿಸಿದ್ದಾರೆ.
ಭಾರತದ ಆರ್ಥಿಕತೆ ಉತ್ತೇಜಿಸುವಲ್ಲಿ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಹಿತಾಸಕ್ತಿಗಳನ್ನು ಪ್ರತಿಪಾದಿಸುವಲ್ಲಿ ಸಿಂಗ್ ಪಾತ್ರವನ್ನು ಪುಟಿನ್ ನೆನೆದಿದ್ದಾರೆ.
'ಮನಮೋಹನ ಸಿಂಗ್ ಅವರೊಂದಿಗೆ ಹಲವಾರು ಭಾರಿ ಸಂಭಾಷಣೆ ನಡೆಸುವ ಅವಕಾಶ ದೊರೆತಿದೆ. ಆ ನೆನಪುಗಳು ಸದಾ ಉಳಿಯುತ್ತವೆ' ಎಂದು ಹೇಳಿದ್ದಾರೆ.
2020ರ ಡಿಸೆಂಬರ್‌ನಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾ ನಡುವಣ ಬಾಂಧವ್ಯವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಹಂತಕ್ಕೆ ವೃದ್ಧಿಸಲಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ.
2004ರಿಂದ 2014ರ ಅವಧಿಯಲ್ಲಿ ಎರಡು ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಮನಮೋಹನ ಸಿಂಗ್ ಅವರನ್ನು ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂದು ಪರಿಗಣಿಸಲಾಗಿದೆ.