ವಯನಾಡ್: ಇಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡು, ಕೊನೆಗೆ ರಸ್ತೆ ಅಪಘಾತದಿಂದಾಗಿ ಮದುವೆ ನಿಶ್ಚಯವಾಗಿದ್ದ ಹುಡುಗನನ್ನೂ ಕಳೆದುಕೊಂಡಿದ್ದ ಶ್ರುತಿ ಅವರು ಸೋಮವಾರ ಕಂದಾಯ ಇಲಾಖೆಯಲ್ಲಿ ಸಹಾಯಕಿ ಆಗಿ ಕೆಲಸಕ್ಕೆ ಸೇರುವುದರ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದರು.
ಶ್ರುತಿ ಅವರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ರಾಜ್ಯ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತ್ತು. ಸೋಮವಾರ ಕಚೇರಿಯಲ್ಲಿ ಅವರಿಗೆ ಉದ್ಯೋಗದ ಮೊದಲ ದಿನವಾಗಿತ್ತು. ಮೊದಲ ದಿನ ಕಚೇರಿಗೆ ತೆರಳುವ ವೇಳೆ ಅವರೊಂದಿಗೆ ಇಲ್ಲಿನ ರಾಜಕೀಯ ಮುಖಂಡರೂ ಇದ್ದರು.
ತಂದೆ-ತಾಯಿ, ಸಹೋದರಿಯರು ಸೇರಿದಂತೆ ಭೂಕುಸಿತದಲ್ಲಿ ಶ್ರುತಿ ಅವರು ತಮ್ಮ ಕುಟುಂಬದ 9 ಮಂದಿಯನ್ನು ಕಳೆದುಕೊಂಡಿದ್ದರು. ನೂತನವಾಗಿ ಕಟ್ಟಿಸಿದ್ದ ಮನೆ, ₹4 ಲಕ್ಷ ಹಣ, 15 ಪವನ್ ಚಿನ್ನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದವು.
ಬದುಕಿನ ಈ ಕಷ್ಟಕಾಲದಲ್ಲಿ ಶ್ರುತಿ ಅವರೊಂದಿಗೆ ಜಾನ್ಸನ್ (ಮದುವೆ ನಿಶ್ಚಯವಾಗಿದ್ದ ಹುಡುಗ) ಇದ್ದರು. ಆದರೆ, ಸೆಪ್ಟೆಂಬರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಶ್ರುತಿ, ಜಾನ್ಸನ್ ಇಬ್ಬರಿಗೂ ತೀವ್ರ ಗಾಯಗಳಾಗಿದ್ದವು. ಶ್ರುತಿ ಅವರು ಗುಣಮುಖರಾದರು. ಆದರೆ, ಜಾನ್ಸನ್ ಮೃತಪಟ್ಟರು.