HEALTH TIPS

ತಾಯ್ನಾಡಿಗೆ ಮರಳಿ: ಸಿರಿಯಾದ ಹೊಸ ಪ್ರಧಾನಿ ಮೊಹಮದ್‌ ಅಲ್‌ ಬಶೀರ್‌ ಕರೆ

ಡಮಾಸ್ಕಸ್‌/ರೋಮ್‌: ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿರುವ ಸಿರಿಯಾ ಪ್ರಜೆಗಳು ಸ್ವದೇಶಕ್ಕೆ ಮರಳಿ ಎಂದು ಸಿರಿಯಾದ ಹೊಸ ಮಧ್ಯಂತರ ಸರ್ಕಾರದ ಪ್ರಧಾನಿ ಮೊಹಮದ್‌ ಅಲ್‌ ಬಶೀರ್‌ ಮನವಿ ಮಾಡಿದ್ದಾರೆ.

ದೇಶವನ್ನು ಮಾರ್ಚ್‌ವರೆಗೂ ಮುನ್ನಡೆಸಲು ಹೋರಾಟಗಾರರ ಗುಂಪು ಬಶೀರ್‌ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಈ ವೇಳೆ ಇಟಲಿಯ ದೈನಿಕ 'ಕೊರಿಯೆರೆ ಡೆಲ್ಲಾ ಸೆರಾ'ಗೆ ಸಂದರ್ಶನ ನೀಡಿರುವ ಅವರು, 'ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ದೇಶ ಹೊಂದಿರುವ ಸಾಲ ಮತ್ತು ಇತರ ಹೊಣೆಗಾರಿಕೆಗಳ ಕುರಿತು ದತ್ತಾಂಶ ಸಂಗ್ರಹಿಸಲಾಗುತ್ತಿದೆ' ಎಂದು ಹೇಳಿದ್ದಾರೆ.

ಬಶೀರ್‌ ಹೇಳಿರುವುದೇನು?:

* ವಿದೇಶಗಳಲ್ಲಿರುವ ಲಕ್ಷಾಂತರ ಸಿರಿಯನ್‌ ನಿರಾಶ್ರಿತರನ್ನು ದೇಶಕ್ಕೆ ಮರಳಿ ತರುವುದು ನನ್ನ ಮೊದಲ ಆದ್ಯತೆ. ದೇಶದಿಂದ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಬಶರ್‌ ಅಸಾದ್‌ ಅವರ ದೀರ್ಘಕಾಲ ಅಧಿಕಾರಾವಧಿಯಲ್ಲಿ ಲಕ್ಷಾಂತರ ಜನರು ದೇಶ ತೊರೆದಿದ್ದಾರೆ. ಅವರನ್ನು ದೇಶಕ್ಕೆ ವಾಪಸ್‌ ಕರೆತರಬೇಕಿದೆ

* ದೇಶವನ್ನು ಪುನಃ ಕಟ್ಟಿ ಬೆಳೆಸಲು ನಿಮ್ಮೆಲ್ಲರ ಅನುಭವ ಮತ್ತು ಮಾನವ ಸಂಪನ್ಮೂಲದ ಅಗತ್ಯವಿದೆ. ಸಿರಿಯಾ ಈಗ ಸ್ವತಂತ್ರ ದೇಶವಾಗಿದ್ದು, ಅದನ್ನು ಪುನರ್‌ ನಿರ್ಮಿಸಲು ನಿಮ್ಮ ನೆರವು ಬೇಕು. ಹೀಗಾಗಿ ತಾಯ್ನಾಡಿಗೆ ಮರಳಿ

* ಸಿರಿಯಾದಲ್ಲಿ 14 ವರ್ಷಗಳ ಅಂತರ್ಯುದ್ಧದಲ್ಲಿ ಸುಮಾರು 5 ಲಕ್ಷ ಜನರು ಕೊಲೆಯಾಗಿದ್ದಾರೆ. ಲಕ್ಷಾಂತರ ಜನರು ದೇಶ ತೊರೆದು ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ದೇಶದ ಎಲ್ಲ ನಾಗರಿಕರನ್ನು ರಕ್ಷಿಸುವ ಮತ್ತು ಮೂಲಭೂತ ಸೇವೆ ಒದಗಿಸುವ ಗುರಿಯಿದೆ

* ದೇಶದ ಸದ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ದೇಶವು ವಿದೇಶಿ ಕರೆನ್ಸಿಯ ಕೊರತೆ ಎದುರಿಸುತ್ತಿದೆ.

* ಅಂತರ್ಯುದ್ಧದ ಬಳಿಕ ಸಿರಿಯಾವನ್ನು ಪುನರ್‌ ನಿರ್ಮಿಸುವ ಸವಾಲು ನಮ್ಮ ಮುಂದಿದೆ. ಬಾಂಬ್‌ ದಾಳಿಗಳಿಂದ ನಗರಗಳು ನಾಶವಾಗಿವೆ. ಗ್ರಾಮೀಣ ಪ್ರದೇಶಗಳು ನಿರ್ಜನಗೊಂಡಿವೆ. ಅಂತರರಾಷ್ಟ್ರೀಯ ನಿರ್ಬಂಧಗಳಿಂದ ಆರ್ಥಿಕತೆ ನಾಶವಾಗಿದೆ

* ಕೆಲ ಇಸ್ಲಾಮಿಸ್ಟ್‌ ಗುಂಪುಗಳ ತಪ್ಪು ನಡವಳಿಕೆಗಳಿಂದ ಅನೇಕ ಜನರನ್ನು, ವಿಶೇಷವಾಗಿ ಪಶ್ಚಿಮದ ದೇಶಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆ ಜತೆಗೆ ಮತ್ತು ಇಸ್ಲಾಂ ಅನ್ನು ಉಗ್ರವಾದದ ಜತೆ ಸಂಯೋಜಿಸಿದಂತಾಗಿದೆ. ಇದು ಸರಿಯಲ್ಲ

* 'ನ್ಯಾಯಿಕ ಧರ್ಮ' ಎಂಬ ಇಸ್ಲಾಮಿನ ಅರ್ಥವನ್ನು ವಿರೂಪಗೊಳಿಸಲಾಗಿದೆ. ನಾವು ಇಸ್ಲಾಮಿಗಳು ಆಗಿರುವುದರಿಂದ, ಸಿರಿಯಾದಲ್ಲಿ ಎಲ್ಲ ಜನರು ಮತ್ತು ಸಮುದಾಯದವರ ಹಕ್ಕುಗಳನ್ನು ಖಾತರಿಪಡಿಸುತ್ತೇವೆ

-ಆಂಟೋನಿ ಬ್ಲಿಂಕೆನ್‌, ಅಮೆರಿಕ ವಿದೇಶಾಂಗ ಕಾರ್ಯದರ್ಶಿಹೊಸ ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಿ ಅಗತ್ಯವಿರುವ ಮಾನವೀಯ ನೆರವು ಒದಗಿಸಬೇಕು. ಸಿರಿಯಾ ಭಯೋತ್ಪಾದನೆಯ ನೆಲೆಯಾಗಿ ಪರಿವರ್ತನೆ ಆಗುವುದನ್ನು ತಡೆಯಬೇಕು

ಸ್ನೇಹ ಗೌರವ ಇರಲಿ: ಪೋಪ್

ವ್ಯಾಟಿಕನ್‌ ಸಿಟಿ: ಸಿರಿಯಾದಲ್ಲಿನ ವಿವಿಧ ಧರ್ಮದ ಜನರ ನಡುವೆ ಪರಸ್ಪರ ಸ್ನೇಹ ಮತ್ತು ಗೌರವ ಇರಲಿ ಎಂದು ಕ್ಯಾಥೋಲಿಕ್‌ ಚರ್ಚ್‌ನ ಮುಖ್ಯಸ್ಥ ಪೋಪ್‌ ಫ್ರಾನ್ಸಿಸ್‌ ಕರೆ ನೀಡಿದ್ದಾರೆ.

'ಸಿರಿಯಾದ ಜನರು ತಮ್ಮ ಪ್ರೀತಿಯ ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯಿಂದ ಬದುಕಬೇಕು. ಹಲವು ವರ್ಷಗಳ ಯುದ್ಧ ಪೀಡಿತ ದೇಶದ ಒಳಿತಿಗಾಗಿ ವಿವಿಧ ಧರ್ಮಗಳ ಜನರು ಪರಸ್ಪರ ಸ್ನೇಹ ಮತ್ತು ಗೌರವದಿಂದ ಒಟ್ಟಾಗಿ ಸಾಗಬೇಕು ಎಂದು ಪ್ರಾರ್ಥಿಸುವುದಾಗಿ' ಅವರು ವ್ಯಾಟಿಕನ್‌ನಲ್ಲಿ ಹೇಳಿದ್ದಾರೆ.‌

ಅಮೆರಿಕ ಇಸ್ರೇಲ್‌ ಯೋಜನೆಯ ಭಾಗ: ಇರಾನ್‌

ಟೆಹ್ರಾನ್‌: ಸಿರಿಯಾದಲ್ಲಿ ಸರ್ಕಾರದ ಪತನ ಸೇರಿದಂತೆ ಇತ್ತೀಚೆಗೆ ನಡೆದಿರುವ ಘಟನೆಗಳು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಯೋಜನೆಯ ಭಾಗ ಎಂದು ಇರಾನ್‌ ಪರಮೋಚ್ಚ ನಾಯಕ ಅಯಾತ್‌ ಉಲ್ಲಾ ಅಲಿ ಖಮೇನಿ ಆರೋಪಿಸಿದ್ದಾರೆ.

'ಅಮೆರಿಕ ಮತ್ತು ಜಿಯೋನಿಸ್ಟ್‌ ಯೋಜನೆಯ ಭಾಗವಾಗಿ ಸಿರಿಯಾದಲ್ಲಿ ಇಷ್ಟೆಲ್ಲಾ ನಡೆದಿದೆ ಎಂಬುದಕ್ಕೆ ಯಾವುದೇ ಸಂಶಯವಿಲ್ಲ. ಈ ಸಂಬಂಧ ನಮ್ಮ ಬಳಿ ಸಾಕ್ಷ್ಯಗಳಿದ್ದು ಯಾವುದೇ ಸಂದೇಹ ಉಳಿದಿಲ್ಲ' ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries