ಮುಂಬೈ: 'ಭಾರತದ ನಿರ್ಧಾರವನ್ನು ಪ್ರಶ್ನಿಸುವ ಅಧಿಕಾರವನ್ನು ನಾವು ಯಾರಿಗೂ ಕೊಟ್ಟಿಲ್ಲ. ದೇಶದ ಹಿತಕ್ಕೆ ಮತ್ತು ಜಗತ್ತಿನ ಒಳಿತಿಗಾಗಿ ನಾವು ಸೂಕ್ತ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೇವೆ. ನಾವು ತೆಗೆದುಕೊಳ್ಳುವ ನಿರ್ಧಾರಗಳಿಗೆ ಯಾರ ಅಪ್ಪಣೆ, ಕಾನೂನು-ಕಟ್ಟಳೆಗಳ ಅಗತ್ಯವಿಲ್ಲ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಭಿಪ್ರಾಯಪಟ್ಟರು.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ವಿಡಿಯೊ ಸಂದೇಶದಲ್ಲಿ ಅವರು ಈ ರೀತಿ ಹೇಳಿದ್ದಾರೆ.
'ಸ್ವಾತಂತ್ರ್ಯವೆಂದರೆ ಯಾವುದೇ ವಿಚಾರಗಳಲ್ಲಿ ತಟಸ್ಥ ನಿಲುವು ತಾಳುವುದು ಎಂದರ್ಥವಲ್ಲ. ದೇಶದ ಹಿತಕ್ಕಾಗಿ ನಾವು ಯಾವ ನಿರ್ಧಾರಗಳನ್ನು ಬೇಕಾದರೂ ತೆಗೆದುಕೊಳ್ಳಬಹುದು. ಭಾರತವು ಖಂಡಿತವಾಗಿಯೂ ಪ್ರಗತಿ ಸಾಧಿಸುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ನಮ್ಮ ಭಾರತೀಯತೆಯನ್ನು ಕಳೆದುಕೊಳ್ಳಬಾರದು' ಎಂದರು.
'ಪ್ರಗತಿ ಮತ್ತು ಆಧುನಿಕತೆ ಎಂದರೆ, ನಮ್ಮ ಪರಂಪರೆಯನ್ನು ತಿರಸ್ಕಾರ ಮಾಡುವುದು ಎಂದು ಹೇಳಿಕೊಡಲಾಗುತ್ತಿತ್ತು. ನಮ್ಮ ಸಂಸ್ಕೃತಿಯ ಬಗ್ಗೆ ಇರುವ ಅಸಹನೆ ಅಥವಾ ಆಮದು ಮಾದರಿಗಳಿಂದ ಹೀಗೆ ಹೇಳಲಾಗುತ್ತಿತ್ತು. ಆದರೆ, ಈಗ ಪ್ರಜಾಪ್ರಭುತ್ವವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ. ಇದರಿಂದ ಧ್ವನಿ ಕಳೆದುಕೊಂಡಿದ್ದವರಿಗೆ ಧ್ವನಿ ಸಿಕ್ಕಂತಾಗಿದೆ. ಭಾರತವು ತನ್ನ ತನವನ್ನು ಮತ್ತೊಮ್ಮೆ ಹುಡುಕುತ್ತಿದೆ' ಎಂದು ಅಭಿಪ್ರಾಯಪಟ್ಟರು.
'ನಾವು ಈಗ ಪ್ರಮುಖ ಘಟ್ಟದಲ್ಲಿ ನಿಂತಿದ್ದೇವೆ. ಕಳೆದ ದಶಕವು ನಮ್ಮ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಅದರಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಆಧುನಿಕತೆಗೆ ಒಗ್ಗಿಕೊಂಡಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಬಡತನ, ತಾರತಮ್ಯ, ಅವಕಾಶ ಇಲ್ಲದಿರುವುದು.. ಇಂಥ ಪುರಾತನ ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬುದನ್ನು ತೋರಿಸಿದ್ದೇವೆ. ಜಾಗತಿಕವಾಗಿ ನಾವು ಈಗ ಸ್ವತಂತ್ರ್ಯ ಶಕ್ತಿಯಾಗಿ ರೂಪುಗೊಂಡಿದ್ದೇವೆ' ಎಂದರು.