HEALTH TIPS

ಗೆಳೆಯನನ್ನು ಬಾಡಿಗೆ ಪಡೆಯುತ್ತಿರುವ ವಿಯೆಟ್ನಾಂ ಯುವತಿಯರು! ಏಕೆ ಈ ಟ್ರೆಂಡ್?

 ವಿಯೆಟ್ನಾಂ :  ಆಗ್ನೇಯ ಏಷ್ಯಾ ರಾಷ್ಟ್ರವಾದ ವಿಯೆಟ್ನಾಂನ ಸಂಪ್ರದಾಯ ಕುಟುಂಬಗಳಲ್ಲಿ ಹೊಸ ಸಮಸ್ಯೆ ತಲೆದೂರಿದೆ.

ಈ ಕುಟುಂಬಗಳಲ್ಲಿನ ಹಲವು ಯುವತಿಯರು ಆಧುನಿಕ ಜಗತ್ತಿನ ರೀತಿ-ರಿವಾಜುಗಳಿಗೆ ತೆರೆದುಕೊಳ್ಳುತ್ತಿದ್ದು ಉದ್ಯೋಗ-ಗಳಿಕೆ-ಉನ್ನತ ಜೀವನಶೈಲಿಯ ಕಡೆ ಮುಖ ಮಾಡುತ್ತಿದ್ದಾರೆ.

ಇದರಿಂದ ಯುವತಿಯರ ಪೋಷಕರು ತಮ್ಮ ಮಕ್ಕಳಿಗೆ ಬೇಗ ಮದುವೆ ಮಾಡಿ, ಮೊಮ್ಮಕ್ಕಳನ್ನು ನೋಡಬೇಕೆಂಬ ಆಸೆಯನ್ನು ಈಡೇರಿಸಿಕೊಳ್ಳಲು ಆಗುತ್ತಿಲ್ಲ.

ಮದುವೆ, ಸಂಸಾರಕ್ಕೆ ಪೋಷಕರು ವಿಯೆಟ್ನಾಂನ ಅನೇಕ ಯುವತಿಯರ ಮೇಲೆ ಒತ್ತಡ ಹೇರುತ್ತಿರುವುದರಿಂದ ಹಾಗೂ ವಿಯೆಟ್ನಾಂನ ಚಂದ್ರಮಾನ ವರ್ಷಕ್ಕೆ ಜೋಡಿಯಾಗಿ ಮನೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಪೋಷಕರ ಹೆಬ್ಬಯಕೆಗಾಗಿ ಯುವತಿಯರು ಬಾಡಿಗೆ ಗೆಳೆತನದ ಮೊರೆ ಹೋಗುತ್ತಿದ್ದಾರೆ.

ಪೋಷಕರ ಇಷ್ಟಾರ್ಥಗಳನ್ನು ಪೂರೈಸಲು, ಉದ್ಯೋಗಕ್ಕೆ ಪ್ರಧಾನ ಆದ್ಯತೆ ಕೊಡುವುದಕ್ಕಾಗಿ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲು ಮತ್ತು ಒಂಟಿ ಜೀವನದ ಹೋಯ್ದಾಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ವಿಯೆಟ್ನಾಂನ ಅನೇಕ ಸಂಪ್ರದಾಯವಾದಿ ಕುಟುಂಬಗಳ ಅನೇಕ ಯುವತಿಯರು ಗೆಳೆಯನನ್ನು ಬಾಡಿಗೆಗಾಗಿ ಪಡೆಯುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವೆಬ್‌ಸೈಟ್ ಮಾಧ್ಯಮ ವರದಿ ಮಾಡಿದೆ.

'ವೃತ್ತಿಜೀವನದ ಉನ್ನತಿಗಾಗಿ ಕಲಿಕೆಯ ನಂತರ ನಾನು 5 ವರ್ಷ ಒಂಟಿಯಾಗಿ ಕಳೆದೆ. ಸದ್ಯ ನನಗೆ ಮದುವೆ ಬೇಡ. ಆದರೆ, ಈ ನಡುವೆ ಪೋಷಕರ ಒತ್ತಡ ನಿರಂತರ ಹೆಚ್ಚುತ್ತಿರುವುದರಿಂದ ನಾನು ಗೆಳೆಯನೊಬ್ಬನನ್ನು ಬಾಡಿಗಾಗಿ ಪಡೆದಿದ್ದೇನೆ' ಎಂದು ವಿಯೇಟ್ನಾಂನ 30 ವರ್ಷದ ಉದ್ಯೋಗಸ್ಥ ಯುವತಿ ಮಿನ್ಹ್ ಥು ಹೇಳುತ್ತಾರೆ.

'ನಾನು ನನಗಿಂತ ಸ್ವಲ್ಪ ಹಿರಿಯನಾದ ವ್ಯಕ್ತಿಯನ್ನು ಐದು ವರ್ಷಕ್ಕೆ ಬಾಡಿಗೆ ಪಡೆದಿದ್ದೇನೆ. ಇದಕ್ಕಾಗಿ ಪ್ರತಿ ತಿಂಗಳು 200 ಡಾಲರ್ ಹಣ ನೀಡುತ್ತೇನೆ. ಇದು ಒಂದು ಒಪ್ಪಂದವಾಗಿದ್ದು ನನಗೇನು ಸಮಸ್ಯೆ ಆಗಿಲ್ಲ. ನನ್ನ ಬಾಡಿಗೆ ಗೆಳೆಯ ನಮ್ಮ ಕುಟುಂಬವನ್ನು ಸಂತೋಷಗೊಳಿಸಿದ್ದಾನೆ. ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾನೆ, ಮನೆಯವರಿಗಾಗಿ ವಿಶೇಷ ಅಡುಗೆಗಳನ್ನು ಮಾಡುತ್ತಾನೆ' ಎಂದು ಮಿನ್ಹ್ ಥು ಮುಗುಳ್ನಗುತ್ತಾರೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ಗೆ ಅನಿಸಿಕೆ ನೀಡಿದ ಹಲವು ಯುವತಿಯರ ಅಭಿಪ್ರಾಯ ಇದೇ ಆಗಿದೆ.

ಯುವತಿಯೊಂದಿಗೆ ಬಾಡಿಗೆ ಗೆಳೆಯನಾಗಿ ಹೋಗುವ ಹಲವು ಯುವಕರ ಗುಂಪು ಚೆನ್ನಾಗಿ ತರಬೇತಿ ಪಡೆದಿರುತ್ತದೆ. ಈ ರೀತಿ ವಿಯೇಂಟ್ನಾಂನಲ್ಲಿ 20 ಸಾವಿರಕ್ಕೂ ಹೆಚ್ಚು ಯುವಕರು ಸಕ್ರಿಯರಾಗಿದ್ದಾರೆ ಎಂದು ವರದಿ ಹೇಳುತ್ತದೆ.

'ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾನು ಜಿಮ್‌ಗೆ ಹೋಗುತ್ತಿದ್ದೇನೆ, ಯೋಗ, ಸಂಗೀತ, ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ' ಎಂದು ಹನೋಯ್‌ನ 25 ವರ್ಷದ ತರುಣ ಹುಯ್ ಟುನ್ ಹೇಳುತ್ತಾರೆ.

'ಬಾಡಿಗೆ ಗೆಳೆಯನಾಗಿ ಹೋಗಲು ಬೇರೆ ಬೇರೆ ಸಂದರ್ಭಗಳಿಗೆ ಬೇರೆ ಬೇರೆ ತರನಾದ ದರಗಳನ್ನು ಟೀಂ ಮ್ಯಾನೇಜರ್‌ಗಳು ನಿರ್ಧಾರ ಮಾಡಿರುತ್ತಾರೆ. ಬಹುತೇಕ ಒಪ್ಪಂದಗಳು ಭಾವನಾತ್ಮಕ ವಿಷಯಗಳನ್ನು ಮತ್ತು ದೈಹಿಕ ಸಂಬಂಧಗಳನ್ನು ನಿಷೇಧಿಸುತ್ತವೆ. ಕೆಲ ಕೇಸ್‌ಗಳಲ್ಲಿ ಯುವತಿಯರು ತಾವು ಬಾಡಿಗೆಗೆ ಪಡೆದ ಗೆಳೆಯನನ್ನು ವರಿಸಿದ್ದಾರೆ. ಕೆಲವದರಲ್ಲಿ ಸಮಸ್ಯೆಗಳೂ ಆಗಿವೆ' ಎಂದು ಅವರು ಹೇಳುತ್ತಾರೆ.

'ಬಹುತೇಕ ಸಂದರ್ಭಗಳಲ್ಲಿ ಕೌಟುಂಬಿಕ ಒತ್ತಡವನ್ನು ನಿಭಾಯಿಸಲು ಯುವತಿಯರು ಬಾಡಿಗೆ ಗೆಳೆಯನನ್ನು ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ' ಎಂಬುದು ಹುಯ್ ಟುನ್ ಅವರ ಮಾತು.

'ಇದೊಂದು ತಾತ್ಕಾಲಿಕ ಆಯ್ಕೆಯಾಗಿದ್ದು ಆದರೆ, ಬಾಡಿಗೆ ಗೆಳೆಯನನ್ನು ಪಡೆಯುವ ಯುವತಿಯರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು' ಎಂದು ವಿಯೆಟ್ನಾಂನ ಅಕಾಡೆಮಿ ಆಫ್ ಜರ್ನಲಿಸಂ ಆಯಂಡ್ ಕಮ್ಯುನಿಕೇಷನ್‌ನ ಸಂಶೋಧಕಿ ಗುಯೇನ್ ಥಾಂಗ್ ಹಾ ಹೇಳುತ್ತಾರೆ.

'ಈ ಒಂದು ಬೆಳವಣಿಗೆ ವಿಯೆಟ್ನಾಂ ಕುಟುಂಬಗಳಲ್ಲಿ ಸಂಭವಿಸುತ್ತಿರುವ ಭಾರಿ ತಲ್ಲಣಗಳನ್ನು ಎತ್ತಿ ತೋರಿಸುತ್ತದೆ. ಯುವತಿ ಬಾಡಿಗೆಗಾಗಿ ಗೆಳೆಯನನ್ನು ತಂದಿದ್ದಾಳೆ ಎಂಬುದು ಗೊತ್ತಾದರೆ ಇದು ಕುಟುಂಬದ ಮೇಲೆ ಆಘಾತ ಉಂಟಾಗುತ್ತದೆ. ಮುಂದೆ ಸಾಮಾಜಿಕ ಸಮಸ್ಯೆಗೂ ಕಾರಣವಾಗುತ್ತದೆ' ಎನ್ನುತ್ತಾರೆ ಡಾ. ಫಾಮ್ ಥಿ ಥುಯ್.

ಜಾಗತಿಕವಾಗಿ ಇದೇನು ಹೊಸ ಪ್ರವೃತ್ತಿಯಲ್ಲ. ಚೀನಾದಲ್ಲೂ ಯುವತಿಯರು ಬೇಗ ಮದುವೆಯಾಗುತ್ತಿಲ್ಲ. ಕಳೆದ ಒಂದು ದಶಕದಲ್ಲಿ ಮದುವೆಗಳು ಭಾರಿ ಸಂಖ್ಯೆಯಲ್ಲಿ ಕುಸಿಯುತ್ತಿವೆ. ಈ ವರ್ಷಾರ್ಧದಲ್ಲಿ 3.43 ಮಿಲಿಯನ್ ಮದುವೆಗಳು ನೋಂದಣಿಯಾಗಿವೆ. ಇದು ದಶಕದಲ್ಲೇ ಅತಿ ಕಡಿಮೆ ಎಂದು ವರದಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries