ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಂಡಲ ಪೂಜಾ ಮಹೋತ್ಸವ ಸಂದರ್ಭ ಶ್ರೀ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಲಿರುವ ಚಿನ್ನಾಭರಣ ಹೊಂದಿದ ಚಿನ್ನದ ಅಂಗಿ(ತಂಗ ಅಂಗಿ)ಘೋಷಯಾತ್ರೆ ಸೋಮವರ ಕೋನ್ನಿ ಮುರಿಙಮಂಗಲಂ ಕ್ಷೇತ್ರ ತಲುಪಿದೆ.
ಆರನ್ಮುಳ ಶ್ರೀ ಪಾರ್ಥಸಾರಥೀ ದೇವಸ್ಥಾನದಿಂದ ಭಾನುವಾರ ವಿಶೇಷವಾಗಿ ಸಜ್ಜುಗೊಳಿಸಲಾದ ರಥದಲ್ಲಿ ಆರಂಭಗೊಂಡ ತಂಗ ಅಂಗಿ ಘೋಷಯಾತ್ರೆ ಓಮಲ್ಲೂರ್ ಶ್ರೀ ರಕ್ತಕಂಠ ಸ್ವಾಮಿ ದೇಗುಲ ಮೂಲಕ ಪಾರಂಪರಿಕ ಕಾನನ ಹಾದಿಯ ಮೂಲಕ ಕೋನ್ನಿ ಕ್ಷೇತ್ರ ತಲುಪಿದೆ. ವೆರುನಾಡ್ ಶ್ರೀ ಶಾಸ್ತಾ ಕ್ಷೇತ್ರದಮೂಲಕ ಹಾದು 25ರಂದು ಸಂಜೆ ದೀಪಾರಾಧನೆಗೂ ಮೊದಲು ಸನ್ನಿಧಾನ ತಲುಪಲಿದೆ. 25ರಂದು ಮಧ್ಯಾಹ್ನ 3ಕ್ಕೆ ಪಂಪೆಯಿಂದ ಹೊರಟು, ಸಂಜೆ 5ಕ್ಕೆ ಶರಂಗುತ್ತಿ ತಲುಪುವ ಘೋಷಯಾತ್ರೆಯನ್ನು ಆಚಾರಾನುಷ್ಠಾನಗಳೊಂದಿಗೆ ಸ್ವಾಗತಿಸಿ ಸನ್ನಿದಾನಕ್ಕೆ ತಲುಪಿಸಲಾಗುವುದು. ಘೋಷಯಾತ್ರೆ ತಲುಪುವ ಕೇಂದ್ರಗಳಲ್ಲಿ ತಂಗ ಅಂಗಿ ವೀಕ್ಷಣೆಗೆ ಭಕ್ತಾದಿಗಳಿಗೆ ಅವಕಾಶಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.