ವಾಷಿಂಗ್ಟನ್: 'ಭಾರತದಿಂದ ಆಮದಾಗುವ ಉತ್ಪನ್ನಗಳಿಗೆ ಹೆಚ್ಚಿನ ದರವನ್ನು ವಿಧಿಸುವ ಪ್ರಸ್ತಾವವನ್ನು ನೂತನ ಸಂಸದ ಸುಹಾಸ್ ಸುಬ್ರಹ್ಮಣ್ಯಂ ವಿರೋಧಿಸಿದ್ದಾರೆ. 'ಇದು, ಉಭಯ ದೇಶಗಳ ನಡುವೆ ವಾಣಿಜ್ಯ ಕಲಹಕ್ಕೆ ನಾಂದಿಯಾಗಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೊಸದಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ, ಭಾರತದಿಂದ ಆಮದಾಗುವ ಉತ್ಪನ್ನಗಳಿಗೆ ಹೆಚ್ಚಿನ ದರ ವಿಧಿಸಲು ಚಿಂತನೆ ನಡೆಸಿದೆ ಎಂಬ ಹಿನ್ನೆಲೆಯಲ್ಲಿ ಈ ಮಾತು ಹೇಳಿದ್ದಾರೆ.
ವರ್ಜಿನಿಯಾದ ನೂತನ ಸಂಸದ 38 ವರ್ಷ ವಯಸ್ಸಿನ ಸುಹಾಸ್ ಸುದ್ದಿಸಂಸ್ಥೆಯ ಜೊತೆಗೆ ಮಾತನಾಡಿದರು. ಇವರು, ಭಾರತ ಮೂಲದ ಆರು ಮಂದಿ ಅಮೆರಿಕನ್ ಸಂಸದದಲ್ಲಿ ಒಬ್ಬರು.
'ಅಧಿಕ ದರ ವಿಧಿಸುವ ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆ. ಅದು ಸರಿಯಲ್ಲ. ಅದು ವಾಣಿಜ್ಯ ಕಲಹಕ್ಕೆ ನಾಂದಿ ಆಗಬಹುದು. ಉಭಯ ರಾಷ್ಟ್ರಗಳಿಗೂ ಇದರಿಂದ ಒಳಿತಾಗದು' ಎಂದು ಹೇಳಿದರು.
ಚುನಾವಣಾ ಪೂರ್ವದಲ್ಲಿ ಡೊನಾಲ್ಡ್ ಟ್ರಂಪ್ ಅವರು ಚೀನಾ ಮತ್ತು ಭಾರತದ ಉತ್ಪನ್ನಗಳಿಗೆ ಹೆಚ್ಚಿನ ದರ ವಿಧಿಸುವ ಕುರಿತು ಮಾತನಾಡಿದ್ದರು.
'ಭಾರತದಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಒಳ್ಳೆ ಕೆಲಸವಾಗುತ್ತಿದೆ. ಭಾರತದ ಕಂಪನಿಗಳು ಅಮೆರಿಕದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿವೆ. ನಾವು ಆರ್ಥಿಕತೆಗೆ ಪೂರಕವಾಗಿ ಕೆಲಸ ಮಾಡಿದ್ದಷ್ಟೂ ಸಬಲರಾಗಲಿದ್ದೇವೆ' ಎಂದು ಸುಹಾಸ್ ಸುಬ್ರಹ್ಮಣ್ಯಂ ಪ್ರತಿಪಾದಿಸಿದರು.
ಅಮೆರಿಕದಲ್ಲಿನ ವಲಸಿಗರ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ಆಗಬೇಕು ಎಂದರು. ಕಾನೂನು ದೃಷ್ಟಿಯಿಂದ ವಲಸೆ ಗಮನಿಸಬೇಕಾಗಿದೆ. ಗಡಿ ರಕ್ಷಣೆಯ ಜೊತೆಗೆ ಒಟ್ಟು ಸಮಸ್ಯೆ ಬಗೆಹರಿಸಲು ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯೋಗ ಕಡಿತ ಕುರಿತ ಟ್ರಂಪ್ ಆಡಳಿತದ ಪ್ರಸ್ತಾವವನ್ನು ವಿರೋಧಿಸುತ್ತೇನೆ ಎಂದು ಹೇಳಿದರು.