ಪಣಜಿ: ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಗೋವಾ ಸಾರಿಗೆ ಸಚಿವ ಮೌವಿನ್ ಗೊಡಿನೋ ಅವರು ತಿಳಿಸಿದ್ದಾರೆ.
ಪಣಜಿಯಲ್ಲಿ ನಡೆಯುತ್ತಿರುವ ಸೇಂಟ್ ಝೇವಿಯರ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾವು ಅಂದುಕೊಂಡಕ್ಕಿಂತ ಆದಷ್ಟು ಬೇಗ ಪೋಪ್ ಫ್ರಾನ್ಸಿಸ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದರು.
ಕಳೆದ ಜೂನ್‌ನಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ತೆರಳಿದ್ದ ಪ್ರಧಾನಿ ಮೋದಿ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಭಾರತಕ್ಕೆ ಬರಲು ಆಹ್ವಾನ ನೀಡಿದ್ದಾರೆ. ಭಾರತಕ್ಕೆ ಬರಲು ಒಪ್ಪಿಕೊಂಡಿರುವ ಅವರು ಇನ್ನೇನು ದಿನಾಂಕವನ್ನಷ್ಟೇ ಘೋಷಣೆ ಮಾಡಬೇಕಿದೆ ಎಂದು ಮೌವಿನ್ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರ ಭಾರತ ಭೇಟಿಯ ಪಟ್ಟಿಯಲ್ಲಿ ಖಂಡಿತವಾಗಿಯೂ ಗೋವಾ ಇರಲಿದೆ ಎಂದು ಅವರು ತಮ್ಮನ್ನು ಭೇಟಿಯಾದ ಕ್ರಿಶ್ಚಿಯನ್ ಸಮುದಾಯದ ಮುಖಂಡರಿಗೆ ಭರವಸೆ ನೀಡಿದರು.