ನವದೆಹಲಿ: ಒಂದೂವರೆ ವರ್ಷದಲ್ಲಿ ದೇಶದ ಯುವ ಜನರಿಗೆ ಸುಮಾರು 10 ಲಕ್ಷದಷ್ಟು ಖಾಯಂ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದ್ದು, ಇದು ದಾಖಲೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ 71,000 ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಈ ಮಟ್ಟದಲ್ಲಿ ಹಿಂದಿನ ಯಾವುದೇ ಸರ್ಕಾರಗಳು ಉದ್ಯೋಗ ನೀಡುವ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಕೇಂದ್ರಬಿಂದು ಯುವಜನರು. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ..
ಉದ್ಯೋಗ ಮೇಳಗಳು ಯುವಕರನ್ನು ಸಬಲೀಕರಣಗೊಳಿಸುತ್ತಿದ್ದು, ಅವರ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿವೆ. ಭಾರತದ ಯುವಕರು ಇಂದು ಸಂಪೂರ್ಣ ಆತ್ಮವಿಶ್ವಾಸದಿಂದ ಇದ್ದು, ಎಲ್ಲ ವಲಯಗಳಲ್ಲೂ ಸಫಲರಾಗುತ್ತಿದ್ದಾರೆ ಎಂದು ಮೊದಿ ಹೇಳಿದ್ದಾರೆ.
ನೇಮಕಗೊಂಡವರ ಪೈಕಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿದ್ದು, ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬುದೇ ಸರ್ಕಾರದ ಧ್ಯೇಯವಾಗಿದೆ ಎಂದಿದ್ದಾರೆ.
26 ವಾರಗಳ ಮಾತೃತ್ವ ರಜೆ ನೀಡುವ ನಮ್ಮ ಸರ್ಕಾರದ ನಿರ್ಧಾರ ಮಹಿಳೆಯರಿಗೆ ವೃತ್ತಿಜೀವನದಲ್ಲಿ ಬಹಳ ಅನುಕೂಲವಾಗಿದೆ. 'ಪಿಎಂ ಆವಾಸ್ ಯೋಜನೆ'ಯಡಿ ನಿರ್ಮಾಣ ಮಾಡಲಾಗಿರುವ ಗರಿಷ್ಠ ಮನೆಗಳ ಮಾಲೀಕರು ಮಹಿಳೆಯರೇ ಆಗಿದ್ದಾರೆ ಎಂದರು.
ಮಹಿಳೆಯರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಕಾಣುತ್ತಿದೆ ಎಂದು ಮೋದಿ ಹೇಳಿದ್ದಾರೆ.