ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಮುಖ ಸಲಹೆಗಾರರಾದ ಮಹ್ಫುಜ್ ಆಲಂ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಆ ದೇಶದೊಂದಿಗೆ ಭಾರತ ಪ್ರಬಲ ಪ್ರತಿಭಟನೆ ದಾಖಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
ಇಂತಹ ಹೇಳಿಕೆಗಳನ್ನು ಸಾರ್ವಜನಿಕವಾಗಿ ಹೇಳುವಾಗ ಜವಾಬ್ದಾರಿಯ ಅಗತ್ಯವಿದೆ ಎಂದು ಹೇಳಿರುವ MEA ವಕ್ತಾರ ರಣಧೀರ್ ಜೈಸ್ವಾಲ್, ಬಾಂಗ್ಲಾದೇಶದೊಂದಿಗೆ ಸಂಬಂಧವನ್ನು ಬೆಳೆಸುವಲ್ಲಿ ಭಾರತದ ಆಸಕ್ತಿಯನ್ನು ಪುನರುಚ್ಚರಿಸಿದ್ದಾರೆ.
ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ದಂಗೆಯನ್ನು ಭಾರತ ಗುರುತಿಸಬೇಕು ಎಂದು ಫೇಸ್ ಬುಕ್ ಖಾತೆಯಲ್ಲಿ ಮಹ್ಫುಜ್ ಆಲಂ ಫೋಸ್ಟ್ ಮಾಡಿದ್ದರು ಎನ್ನಲಾಗಿದೆ. ಅದನ್ನು ಇದೀಗ ಡಿಲೀಟ್ ಮಾಡಲಾಗಿದೆ.
ಬಾಂಗ್ಲಾದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರುದ್ಧ ಹಿಂಸಾತ್ಮಾಕ ಪ್ರತಿಭಟನೆ ಭುಗಿಲೆದ್ದ ನಂತರ ಹಸೀನಾ ರಾಜೀನಾಮೆ ನೀಡಿದ್ದರು. ಢಾಕಾದಲ್ಲಿ ಅವರ ಸುರಕ್ಷತೆಗೆ ಉದ್ರಿಕ್ತರು ಬೆದರಿಕೆ ಹಾಕಿದ್ದರಿಂದ ಆಗಸ್ಟ್ ನಲ್ಲಿ ಸೇನಾ ವಿಮಾನದೊಂದಿಗೆ ಅಲ್ಲಿಂದ ನಿರ್ಗಮಿಸಿದ್ದರು. ಅವರು ಢಾಕಾ ತೊರೆದ ನಂತರ ಅವರ ಮನೆಯನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದರು.
ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾದಾಗಿನಿಂದಲೂ ಭಾರತ ಮತ್ತು ಬಾಂಗ್ಲಾದೇಶದ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿದೆ.
ಗುರುವಾರ ಬಾಂಗ್ಲಾದೇಶದಲ್ಲಿನ ಹಿಂದೂಗಳು ಮತ್ತಿತರ ಅಲ್ಪಸಂಖ್ಯಾತರ ಮೇಲಿನ ಹಿಂಸಾತ್ಮಾಕ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಅಲ್ಲಿರುವ ಹಿಂದೂಗಳ ಪ್ರಾಣ ಮತ್ತು ಸ್ವಾತಂತ್ರ್ಯಕ್ಕೆ ಬಾಂಗ್ಲಾದೇಶದ ಮಧ್ಯಂತರದ ಸರ್ಕಾರವೇ ಪ್ರಾಥಮಿಕ ಹೊಣೆ ಹೊರಬೇಕು ಎಂದು ಹೇಳಿತ್ತು.
ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಕೀರ್ತಿ ವರ್ಧನ್ ಸಿಂಗ್, ನೆರೆಯ ದೇಶದ ಹಿಂದೂಗಳು ಮತ್ತಿತರ ಅಲ್ಪಸಂಖ್ಯಾತ ರ ಭದ್ರತೆ ಮತ್ತು ಸುರಕ್ಷತೆ ಖಾತ್ರಿಗೆ ಸಂಬಂಧಿಸಿದಂತೆ ಭಾರತದ ಕಳವಳನ್ನು ಬಾಂಗ್ಲಾದೇಶಕ್ಕೆ ತಿಳಿಸಲಾಗಿದೆ ಎಂದು ಹೇಳಿದ್ದರು.