ಡೆಮಾಸ್ಕಸ್: ಸಿರಿಯಾದಲ್ಲಿ ಬಂಡಾಯವೆದ್ದ ಹೋರಾಟಗಾರರ ಕಮಾಂಡರ್ ಮೊಹಮ್ಮದ್ ಅಲ್ ಗೋಲಾನಿ ಅವರು ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಮತ್ತು ಉಪ ಅಧ್ಯಕ್ಷ ಫೈಸಲ್ ಮೆಕ್ದಾದ್ ಅವರನ್ನು ಭೇಟಿ ಮಾಡಿ, ಮಧ್ಯಂತರ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿದ್ದಾರೆ.
ಹೋರಾಟಗಾರರ ನಿಯಂತ್ರಣದಲ್ಲಿದ್ದ ಸಣ್ಣ ಪ್ರದೇಶವೊಂದರ ಆಡಳಿತ ನಡೆಸುತ್ತಿದ್ದ ಮೊಹಮದ್ ಅಲ್ ಬಶೀರ್ ಅವರು ಮಧ್ಯಂತರ ಸರ್ಕಾರದ ನೇತೃತ್ವ ವಹಿಸುವ ಸಾಧ್ಯತೆಯಿದೆ ಎಂದು ಅಲ್ ಜಜೀರಾ ವಾಹಿನಿ ವರದಿ ಮಾಡಿದೆ.
ಸಹಜ ಸ್ಥಿತಿಯತ್ತ: ಸಿರಿಯಾದಲ್ಲಿ ಜನರ ಬಂಡಾಯದಿಂದಾಗಿ ಅಲ್ಲಿನ ಅಧ್ಯಕ್ಷ ಬಶರ್ ಅಸಾದ್ ಸರ್ಕಾರ ಪತನವಾದ ಮರು ದಿನ ದೇಶ ಸಹಜ ಸ್ಥಿತಿಗೆ ಮರಳುತ್ತಿದ್ದು, ಸರ್ಕಾರವೂ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ಜಲಾಲಿ ಸೋಮವಾರ ಹೇಳಿದ್ದಾರೆ.
ಡೆಮಾಸ್ಕಸ್‌ನ ಕಾರ್ಯಾಲಯಗಳಲ್ಲಿ ಕೆಲ ಸಂಪುಟ ಸಚಿವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅವರು ದೇಶ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದಿದ್ದಾರೆ.
'ಮಧ್ಯಂತರ ಅವಧಿಯ ಆಡಳಿತಕ್ಕಾಗಿ ನಾವು ತ್ವರಿತವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಅವರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.
'ದೇಶದಲ್ಲಿ ಭದ್ರತಾ ಸ್ಥಿತಿ ಸುಧಾರಿಸಿದ್ದು, ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸಿ ಸಂಭ್ರಮ ಆಚರಿಸುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.
'ಹೋರಾಟಗಾರರ ಗುಂಪಿಗೆ 'ಪೂರ್ಣ ಸಹಕಾರ' ನೀಡುತ್ತೇವೆ. ನನ್ನ ಸರ್ಕಾರ ಇನ್ನು ಹೋರಾಟಗಾರರ ಸರ್ಕಾರವಾಗಿ ಬದಲಾಗಲಿದೆ' ಎಂದು ಜಲಾಲಿ ಭಾನುವಾರ ಪ್ರತಿಕ್ರಿಯಿಸಿದ್ದರು.
ಸಿರಿಯಾ ಕರೆನ್ಸಿ ಮುಂದುವರಿಯಲಿದೆ: ಸಿರಿಯಾದ ಬ್ಯಾಂಕ್‌ಗಳು ಮಂಗಳವಾರದಿಂದ ಪುನಃ ಕಾರ್ಯಾರಂಭ ಮಾಡಲಿವೆ. ಕಚೇರಿಗಳಿಗೆ ಹಿಂತಿರುಗುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಸಿರಿಯಾದ ಸೆಂಟ್ರಲ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿರಿಯಾದ ಕರೆನ್ಸಿ ಮುಂದುವರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಅಸಾದ್ ಸಹೋದರನ ಸಹಾಯಕನ ಶವ ಪತ್ತೆ: ಪಲಾಯನ ಮಾಡಿದ ಅಸಾದ್ ಅವರ ಸಹೋದರ ಮಹತ್ ಅವರ ಹಿರಿಯ ಸಹಾಯಕರೊಬ್ಬರ ಶವ ಡಮಾಸ್ಕಸ್‌ನ ಅವರ ಕಚೇರಿಯಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಿರಿಯಾದ ಉತ್ತರ ಭಾಗದ ಮನ್‌ಬಿಜ್ ನಗರವನ್ನು ಪೂರ್ಣ ಪ್ರಮಾಣದಲ್ಲಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಟರ್ಕಿಯೆ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಸಿರಿಯಾದ ಅಲ್ ಮಿಸ್ಟ್ರಿಹಾ ಗ್ರಾಮದಲ್ಲಿ ಟರ್ಕಿಯೆ ಡ್ರೋನ್ ದಾಳಿ ನಡೆಸಿದ್ದು, 12 ಜನರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿರಿಯಾದಲ್ಲಿ ಹೊಸ ಯುಗದ ಭರವಸೆ ಮೂಡಿದೆ. ಆದರೆ ಇಲ್ಲಿನ ಪರಿಸ್ಥಿತಿಯ ಲಾಭ ಪಡೆಯಲು ಐಎಸ್ ಅಥವಾ ಕುರ್ದಿಶ್ ಹೋರಾಟಗಾರರಿಗೆ ಅವಕಾಶ ನೀಡಬಾರದು. ಸಿರಿಯಾವನ್ನು 'ಭಯೋತ್ಪಾದಕರ ಸ್ವರ್ಗವನ್ನಾಗಿ' ಪರಿವರ್ತಿಸುವುದನ್ನು ಟರ್ಕಿಯೆ ತಡೆಯುತ್ತದೆ ಎಂದಿದ್ದಾರೆ.
- ವೋಲ್ಕರ್ ಟರ್ಕ್ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ಯುದ್ಧಾಪರಾಧಗಳಿಗಾಗಿ ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಗೆ ತರಬೇಕು.ಹೋರಾಟಗಾರರು ಡೆಮಾಸ್ಕಸ್ ಅನ್ನು ವಶಕ್ಕೆ ಪಡೆದ ಬಳಿಕ ಸಿರಿಯಾದ 4000ಕ್ಕೂ ಹೆಚ್ಚು ಸೈನಿಕರು ಗಡಿ ದಾಟಿ ಇರಾಕ್ ಪ್ರವೇಶಿಸಿದ್ದಾರೆ ಎಂದು ಇರಾಕ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳು ಮದ್ದುಗುಂಡುಗಳು ಮತ್ತು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸಿರಿಯಾದ ಸೈನಿಕರು ಇರಾಕ್ ಪ್ರವೇಶಿಸಿದ್ದಾರೆ. ಅವರನ್ನು ಶಿಬಿರದಲ್ಲಿ ಇರಿಸಲಾಗುವುದು ಎಂದು ಇರಾಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಆ ಶಿಬಿರ ಎಲ್ಲಿರುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.ಇರಾಕ್ ಪ್ರವೇಶಿಸಿದ ಸಿರಿಯಾದ 4000 ಸೈನಿಕರು
ಅಸಾದ್‌ಗೆ ರಷ್ಯಾ ಆಶ್ರಯ
ಮಾಸ್ಕೊ: ಸಿರಿಯಾದಿಂದ ಪಲಾಯನ ಮಾಡಿರುವ ಮಾಜಿ ಅಧ್ಯಕ್ಷ ಬಶರ್ ಅಸಾದ್ ಅವರಿಗೆ ರಷ್ಯಾ ರಾಜಕೀಯ ಆಶ್ರಯ ನೀಡಿದೆ ಎಂದು ಕ್ರೆಮ್ಲಿನ್ ಸೋಮವಾರ ತಿಳಿಸಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವೈಯಕ್ತಿಕವಾಗಿ ಅಸಾದ್ ಅವರಿಗೆ ಅಶ್ರಯ ನೀಡಲು ನಿರ್ಧರಿಸಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ತಿಳಿಸಿದರು. ಅಸಾದ್ ಅವರನ್ನು ಎಲ್ಲಿ ಇರಿಸಲಾಗಿದೆ ಎಂಬುದರ ಬಗ್ಗೆ ಪಸ್ಕೋವ್ ಪ್ರತಿಕ್ರಿಯಿಸಲಿಲ್ಲ. ಪುಟಿನ್ ಅವರು ಅಸ್ಸಾದ್ ಅವರನ್ನು ಭೇಟಿಯಾಗಲು ಯೋಜಿಸಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.
ಸಿರಿಯಾದಲ್ಲಿನ ಶಂಕಿತ ರಾಸಾಯನಿಕ ಶಸ್ತ್ರಾಸ್ತ್ರ ತಾಣಗಳು ಮತ್ತು ದೀರ್ಘ ಶ್ರೇಣಿಯ ಕ್ಷಿಪಣಿ ರಾಕೆಟ್‌ಗಳಿರುವ ತಾಣಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಈ ಶಸ್ತ್ರಾಸ್ತ್ರಗಳು ಹೋರಾಟಗಾರರ ಕೈ ಸೇರಬಾರದು ಎಂಬ ಉದ್ದೇಶದಿಂದ ದಾಳಿ ನಡೆಸಿದ್ದಾಗಿ ಇಸ್ರೇಲ್‌ನ ವಿದೇಶಾಂಗ ಸಚಿವ ಸೋಮವಾರ ತಿಳಿಸಿದ್ದಾರೆ. ಇರಾನ್ ಮತ್ತು ಲೆಬೆನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನ ಪ್ರಮುಖ ಮಿತ್ರನಾಗಿದ್ದ ಅಸಾದ್ ಸರ್ಕಾರದ ಪತನವನ್ನು ಇಸ್ರೇಲಿಗಳು ಸ್ವಾಗತಿಸಿದ್ದಾರೆ. ಆದರೆ ಮುಂದೆ ಏನಾಗಬಹುದೋ ಎಂಬ ಕಳವಳ ಅವರನ್ನು ಆವರಿಸಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ತನ್ನ ಪಡೆಗಳು ಸಿರಿಯಾದೊಳಗಿನ ಬಫರ್ ವಲಯವನ್ನು ವಶಪಡಿಸಿಕೊಂಡಿವೆ ಎಂದು ಇಸ್ರೇಲ್ ಹೇಳಿದೆ. 'ಇಸ್ರೇಲ್ ಮತ್ತು ಅದರ ನಾಗರಿಕರ ಭದ್ರತೆ ನಮ್ಮ ಏಕೈಕ ಆಸಕ್ತಿಯಾಗಿದೆ' ಎಂದು ಸುದ್ದಿಗಾರರಿಗೆ ತಿಳಿಸಿದ ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಸಚಿವ ಗಿಡಿಯಾನ್ ಸಾರ್ 'ಅದಕ್ಕಾಗಿಯೇ ಸಿರಿಯಾದಲ್ಲಿ ಉಳಿದಿರುವ ರಾಸಾಯನಿಕ ಶಸ್ತ್ರಾಸ್ತ್ರಗಳು ಅಥವಾ ದೀರ್ಘ ಶ್ರೇಣಿಯ ಕ್ಷಿಪಣಿಗಳು ಮತ್ತು ರಾಕೆಟ್‌ಗಳಂತಹ ಶಸ್ತ್ರಾಸ್ತ್ರಗಳಿರುವ ತಾಣಗಳ ಮೇಲೆ ದಾಳಿ ಮಾಡಿದ್ದೇವೆ. ಈ ಶಸ್ತ್ರಾಸ್ತ್ರಗಳು ಹೋರಾಟಗಾರರ ಕೈಗೆ ಸಿಗಬಾರದು ಎಂಬುದು ನಮ್ಮ ಆಶಯವಾಗಿದೆ' ಎಂದು ಅವರು ಹೇಳಿದ್ದಾರೆ.ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಸಿರಿಯಾ ಜನರಿಗೆ ಐತಿಹಾಸಿಕ ಅವಕಾಶ ಸಿಕ್ಕಿದೆ: ಬೈಡನ್
ವಾಷಿಂಗ್ಟನ್: 'ಸಿರಿಯಾದಲ್ಲಿ ಹಿಂದಿನ ಅರ್ಧ ಶತಮಾನದ ಅವಧಿಯಲ್ಲಿ ಬಶರ್ ಅಸಾದ್ ಆಡಳಿತವು ಅಮಾಯಕ ಜನರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದಿತ್ತು. ಈ ಆಡಳಿತದ ಪತನವು ದೇಶದ ಜನರಿಗೆ ಐತಿಹಾಸಿಕ ಅವಕಾಶವನ್ನು ಒದಗಿಸಿದೆ' ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಬಣ್ಣಿಸಿದ್ದಾರೆ.
ಅಸಾದ್ ಸರ್ಕಾರದ ಪತನದ ಬಳಿಕ ಶ್ವೇತಭವನದಲ್ಲಿ ಭಾನುವಾರ ಮಾತನಾಡಿದ ಅವರು 'ಈ ಆಡಳಿತವು ಸಿರಿಯಾದಲ್ಲಿ ಲಕ್ಷಾಂತರ ಮುಗ್ಧ ಜನರನ್ನು ಚಿತ್ರಹಿಂಸೆ ನೀಡಿ ಕೊಂದಿದೆ. ಇಂತಹ ಸರ್ಕಾರದ ಪತನ ನ್ಯಾಯೋಚಿತವಾದದ್ದು. ದೀರ್ಘಕಾಲದಿಂದ ನೊಂದಿರುವ ಸಿರಿಯಾದ ಜನರಿಗೆ ಇದೀಗ ಐತಿಹಾಸಿಕ ಅವಕಾಶ ದೊರೆತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಅವರು ತಮ್ಮ ಹೆಮ್ಮೆಯ ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಬೇಕು' ಎಂದು ಕಿವಿಮಾತು ಹೇಳಿದ್ದಾರೆ.
ಕೆಲ ವಾರಗಳಿಂದ ಅಸಾದ್ ಆಡಳಿತಕ್ಕೆ ಹಿಜ್ಬುಲ್ಲಾ ಇರಾನ್ ಮತ್ತು ರಷ್ಯಾದ ಬೆಂಬಲ ಕುಸಿತವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಅಸಾದ್ ಸರ್ಕಾರವನ್ನು ಪದಚ್ಯುತಗೊಳಿಸಿದ ಸಿರಿಯನ್ ಹೋರಾಟಗಾರರ ನೇತೃತ್ವವಹಿಸಿಕೊಂಡಿರುವ ಹಯಾತ್ ತಾಹಿರ್ ಅಲ್ ಶಾಮ್ ಗುಂಪು ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂದು ಅಮೆರಿಕ ಹೇಳಿದೆ. ಆದರೆ ತಾವು ಅಲ್ ಖೈದಾ ಜತೆಗಿನ ಸಂಬಂಧ ಕಡಿದುಕೊಂಡಿರುವುದಾಗಿ ಈ ಗುಂಪು ಹೇಳಿದೆ.