ನವದೆಹಲಿ: ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮನಮೋಹನ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಪ್ರಮಾಣವಚನ ಬೋಧಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಒಟ್ಟು ಹುದ್ದೆಗಳ ಸಂಖ್ಯೆ 34 ಇದ್ದು ಇದೀಗ ಸಿಜೆಐ ಸೇರಿ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿದೆ.
61 ವರ್ಷದ ಮನಮೋಹನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸುವಂತೆ ನ.28ರಂದು ಕೊಲಿಜಿಯಂ ಶಿಫಾರಸು ಮಾಡಿತ್ತು. ಡಿ.3ರಂದು ಮನಮೋಹನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.
2008ರ ಮಾ.13ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮನಮೋಹನ್ ಅವರು, 2024ರ ಸೆ.29ರಿಂದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.