ಮಂಗಳೂರು: ಯಕ್ಷಗಾನದ ಮೊದಲ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ತಮ್ಮ ಕಂಠ ಸಿರಿಯಿಂದಲೇ ಕರಾವಳಿಯಲ್ಲಿ ಮನೆಮಾತಾಗಿದ್ದ ಲೀಲಾವತಿ ಬೈಪಾಡಿತ್ತಾಯ (77) ಅವರು ಶನಿವಾರ ನಿಧನರಾದರು.
ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಹುಟ್ಟಿ ಬೆಳೆದ ಲೀಲಾವತಿ ಅವರು ತೆಂಕುತಿಟ್ಟಿನ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ವಿವಾಹವಾಗಿದ್ದರು.
ಹೆಣ್ಣು ಮಕ್ಕಳು ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಕಾಲದಲ್ಲಿ ಅವರು ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಹೆಸರು ಗಳಿಸಿದ್ದರು. ಪತಿಯೊಂದಿಗೆ ಅವರು ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಬಪ್ಪನಾಡು, ಕುಂಬ್ಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ 20 ವರ್ಷ ಭಾಗವತರಾಗಿ ಕೆಲಸ ಮಾಡಿದ್ದರು. 17ಕ್ಕೂ ಹೆಚ್ಚು ವರ್ಷ ಅತಿಥಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ವೃತ್ತಿ ಮೇಳಗಳಲ್ಲಿ ತಿರುಗಾಟ ನಡೆಸಿದ ಏಕೈಕ ಮಹಿಳಾ ಭಾಗವತರು ಎಂಬ ಶ್ರೇಯವೂ ಅವರಿಗಿದೆ.
ಲೀಲಾವತಿ ಅವರು ಅನೇಕ ಮಹಿಳೆಯರಿಗೆ ಯಕ್ಷಗಾನದ ಭಾಗವತಿಕೆ ಕಲಿಸಿದ್ದಾರೆ. ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮೊದಲಾದ ಕಡೆ ಯಕ್ಷಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠ ಮಾಡಿದ್ದಾರೆ.
ಬಡತನದಿಂದಾಗಿ ಶಾಲೆಗೆ ಹೋಗದ ಅವರು ಅಣ್ಣನಿಂದ, ಅಕ್ಕ ಪಕ್ಕದವರ ಸಹಾಯದಿಂದ ಅಕ್ಷರಾಭ್ಯಾಸ ಮಾಡಿದ್ದರು. ಬಳಿಕ 'ಹಿಂದಿ ವಿಶಾರದ' ಪದವಿಯನ್ನು ಪಡೆದಿದ್ದರು.
ಅವರಿಗೆ ರಾಜ್ಯ ಸರ್ಕಾರವು ಈ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಗೂ 2010ನೇ ಸಾಲಿನಲ್ಲಿ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2012ರಲ್ಲಿ ಸಾಧಕ ಹಿರಿಯ ನಾಗರಿಕ ಪ್ರಶಸ್ತಿಗೂ ಅವರು ಭಾಜನರಾಗಿದ್ದರು. ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಅವರು ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರಿಗೆ ಪತಿ ಹರಿನಾರಾಯಣ ಬೈಪಾಡಿತ್ತಾಯ, ಪುತ್ರರಾದ 'ಪ್ರಜಾವಾಣಿ' ಡಿಜಿಟಲ್ ವಿಭಾಗದ ಸಂಪಾದಕ ಅವಿನಾಶ ಬೈಪಾಡಿತ್ತಾಯ ಹಾಗೂ ಗುರುಪ್ರಸಾದ ಬೈಪಾಡಿತ್ತಾಯ ಇದ್ದಾರೆ. ಅವರು ಇಂದು ನಿಧನರಾದರು.