ನವದೆಹಲಿ: ಖ್ಯಾತ ಕರ್ನಾಟಕ ಸಂಗೀತ ಗಾಯಕ ಟಿ.ಎಂ ಕೃಷ್ಣ ಅವರನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತರು ಎಂದು ಗುರುತಿಸಬಾರದು ಸುಪ್ರೀಂ ಕೋರ್ಟ್ ಸೋಮವಾರ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ.
ದಿವಂಗತ ಗಾಯಕಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಆರೋಪದ ಮೇರೆಗೆ ಅವರ ಹೆಸರಿನಲ್ಲಿ ಕೃಷ್ಣ ಅವರಿಗೆ ಪ್ರಶಸ್ತಿ ನೀಡಬಾರದು ಎಂದು ಅವರ ಮೊಮ್ಮಗ ವಿ.ಶ್ರೀನಿವಾಸನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.
ಎಲ್ಲಾ ಸಂಗೀತ ಅಭಿಮಾನಿಗಳು ಆರಾಧಿಸುವ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ನ್ಯಾಯಾಲಯವು ಗೌರವ ಸಲ್ಲಿಸುತ್ತದೆ. ಅವರು ವಿಶಿಷ್ಟ ಗಾಯಕರು. ಅವರು ಡಿಸೆಂಬರ್ 2004ರಲ್ಲಿ ನಿಧನರಾದರೂ ಅವರ ಸುಮಧುರ ಕಂಠಸಿರಿಯನ್ನು ಕೇಳಿ ಅಭಿಮಾನಿಗಳು ಆನಂದಪಡುವುದನ್ನು ಮುಂದುವರೆಸಿದ್ದಾರೆ. ಪ್ರಶಸ್ತಿಯನ್ನು ಈಗಾಗಲೇ ಕೃಷ್ಣ ಅವರಿಗೆ ಪ್ರದಾನ ಮಾಡಲಾಗಿದೆ. ಹೀಗಾಗಿ ಅವರನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿಗೆ ಭಾಜನರಾದವರು ಎಂದು ಗುರುತಿಸುವುದು ಬೇಡ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಗಾಯಕ ಕೃಷ್ಣ, ಮ್ಯೂಸಿಕ್ ಅಕಾಡೆಮಿ, ದಿ ಹಿಂದೂ ಮತ್ತು ಟಿಹೆಚ್ ಜಿ ಪಬ್ಲಿಕೇಷನ್ ಲಿಮೆಟೆಡ್ ಗೆ ನ್ಯಾಯಪೀಠ ನೋಟಿಸ್ ನೀಡಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.