2012ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾಗಿದ್ದು ಹಾಗೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 6 ಬೈಪಾಸ್ ಸರ್ಜರಿಗೆ ಒಳಗಾಗಿದ್ದು ಕಾಂಗ್ರೆಸ್‌ನ ಕುಸಿತಕ್ಕೆ ಕಾರಣ. ಒಂದು ವೇಳೆ ಬೇರೆ ನಾಯಕತ್ವದಲ್ಲಿ 2014ರ ಲೋಕಸಭೆ ಚುನಾವಣೆ ಎದುರಿಸಿದ್ದರೆ ಹೀನಾಯ ಸೋಲಿನಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
'2012ರಲ್ಲಿ ಎರಡು ಆಘಾತಗಳು ಉಂಟಾದವು; ಮೊದಲನೆಯದು ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾದರು. ಇನ್ನೊಂದು ಡಾ. ಮನಮೋಹನ್ ಸಿಂಗ್ 6 ಬೈಪಾಸ್ ಸರ್ಜರಿಗೆ ಒಳಗಾದರು. ಹೀಗಾಗಿ ಸರ್ಕಾರ ಹಾಗೂ ಪಕ್ಷದ ನಾಯಕತ್ವದ ಶಕ್ತಿ ಉಡುಗಿತು' ಎಂದು ಹೇಳಿದ್ದಾರೆ.
'ಒಂದು ವೇಳೆ ಪ್ರಣಬ್ ಮುಖರ್ಜಿ ಪ್ರಧಾನಮಂತ್ರಿಯನ್ನಾಗಿಯೂ, ಮನಮೋಹನ್ ಸಿಂಗ್ ರಾಷ್ಟ್ರಪತಿಯನ್ನಾಗಿಯೂ ಮಾಡಿದರೂ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿತ್ತು. ಆದರೆ 44 ಸೀಟುಗಳಿಗೆ ಕುಸಿಯುವಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲ' ಎಂದು ನುಡಿದಿದ್ದಾರೆ.
2013ರಲ್ಲಿ ಎಲ್ಲರೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ನಮ್ಮ ವಿರುದ್ಧ ಮಾಡಲಾಗಿದ್ದ ಹಲವು ಆರೋಪಗಳಿಗೆ ಉತ್ತರಿಸಲು ಆಗಿರಲಿಲ್ಲ. ಆದರೆ ಅದ್ಯಾವುದೂ ನ್ಯಾಯಾಲಯದಲ್ಲಿ ಸ್ಥಾಪಿತವಾಗಿಲ್ಲ ಎಂದು ಹೇಳಿದ್ದಾರೆ.
'ಆರೋಪಗಳಿಗೆ ಉತ್ತರಿಸುವಷ್ಟು ವಿಶ್ವಾಸಾರ್ಹತೆಯನ್ನು ಸರ್ಕಾರ ಉಳಿಸಿಕೊಂಡಿರಲಿಲ್ಲ. ಹಸಿದ ಮಾಧ್ಯಮಗಳಿಗೆ ಉತ್ತರಿಸಲೂ ಆಗಿರಲಿಲ್ಲ. ಸಂಬಂಧಿಸಿದ ಮಂತ್ರಿಗಳು ರಾಜೀನಾಮೆ ನೀಡಿದರೆ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಭಾವಿಸಲಾಗಿತ್ತು' ಎಂದು ಹೇಳಿದ್ದಾರೆ.
'ಮಂತ್ರಿಗಳ ರಾಜೀನಾಮೆಯು ಏನನ್ನೂ ಪರಿಹರಿಸಲಿಲ್ಲ. ಸಾಬೀತಾಗದ ಆರೋಪಗಳು ಸರ್ಕಾರದ ಖ್ಯಾತಿಗೆ ಮಸಿ ಬಳಿದವು. ಕಾಮನ್‌ವೆಲ್ತ್ ಹಗರಣವು ಸಾರ್ವಜನಿಕರ ದೃಷ್ಠಿಯಲ್ಲಿ ಸರ್ಕಾರವನ್ನು ಮತ್ತಷ್ಟು ಕಳೆಗುಂದುವಂತೆ ಮಾಡಿತು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಅಣ್ಣಾ ಹಜಾರೆ ನೇತೃತ್ವದ 'India Against Corruption' ಆಂದೋಲನವು ಯುಪಿಎ ಸರ್ಕಾರದ ಚುನಾವಣಾ ಪ್ರಣಾಳಿಕೆಯನ್ನು ತಪ್ಪಾಗಿ ಬಿಂಬಿಸಿತು ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಲು ಇಬ್ಬರಿಗೆ ಸಾಧ್ಯ! ಅದು, ತಾಯಿ ಮತ್ತು ಮಗನಿಗೆ ಮಾತ್ರ: ಮಣಿಶಂಕರ್ ಅಯ್ಯರ್
ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದೂ ಗಾಂಧಿಗಳೇ
ತಮ್ಮ ರಾಜಕೀಯ ಜೀವನದ ಬಗ್ಗೆಯೂ ಮುಕ್ತವಾಗಿ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ನನ್ನ ರಾಜಕೀಯ ಜೀವನ ರೂಪಿಸಿದ್ದೂ, ಕೆಡವಿದ್ದೂ ಗಾಂಧಿಗಳೇ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
'ನನ್ನ ರಾಜಕೀಯ ಜೀವನದುದ್ದಕ್ಕೂ ಗಾಂಧಿ ಕುಟುಂಬದೊಂದಿಗೆ ಮುಖಾಮುಖಿ ಭೇಟಿಯಾಗಿ ಚರ್ಚೆ ಮಾಡುತ್ತಿದ್ದೆ. ಆದರೆ ಕಳೆದ 10 ವರ್ಷದಲ್ಲಿ ಒಮ್ಮೆಯೂ ಸೋನಿಯಾ ಗಾಂಧಿಯವರ ಜೊತೆ ಮಾತನಾಡಲು ಅವಕಾಶ ನೀಡಿಲ್ಲ. ರಾಹುಲ್ ಗಾಂಧಿಯವರ ಜೊತೆ ಒಮ್ಮೆ ಮಾತ್ರ ಮುಖಾಮುಖಿ ಭೇಟಿಗೆ ಅವಕಾಶ ಸಿಕ್ಕಿದೆ. ಪ್ರಿಯಾಂಕಾ ಗಾಂಧಿ ಅವರ ಜೊತೆ ಇಂಥ ಅವಕಾಶ ಎರಡು ಬಾರಿ ಲಭಿಸಿದೆ. ಅವರು ಕೆಲವೊಮ್ಮೆ ಫೋನ್ ಮುಖಾಂತರ ಸಂಪರ್ಕಿಸುತ್ತಾರೆ. ಹೀಗಾಗಿ ನಾನು ಅವರ ಜೊತೆ ಸಂಪರ್ಕ ಹೊಂದಿದ್ದೇನೆ. ನನ್ನ ರಾಜಕೀಯ ಜೀವನದ ಅಣಕ ಏನೆಂದರೆ ನನ್ನ ರಾಜಕೀಯ ಜೀವನ ರೂಪುಗೊಂಡಿದ್ದೂ, ಕೆಡವಿದ್ದೂ ಗಾಂಧಿ ಕುಟುಂಬವೇ' ಎಂದು ಹೇಳಿದ್ದಾರೆ.
ಅಲ್ಲದೆ ರಾಹುಲ್ ಗಾಂಧಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಪ್ರಿಯಾಂಕಾ ಗಾಂಧಿ ಮೂಲಕ ತಿಳಿಸಿದ ಘಟನೆಯನ್ನೂ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ. 'ನಾನು ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿದ್ದೆ. ಅವರು ನನ್ನ ಬಗ್ಗೆ ಸಹಾನುಭೂತಿ ಹೊಂದಿದ್ದರು. ರಾಹುಲ್ ಗಾಂಧಿಯವರ ಜನ್ಮದಿನ ಜೂನ್‌ನಲ್ಲಿ ಬರುವುದರಿಂದ, ಪ್ರಿಯಾಂಕಾ ಗಾಂಧಿಯವರ ಮೂಲಕ ರಾಹುಲ್ ಗಾಂಧಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದೆ' ಎಂದು ಹೇಳಿದ್ದಾರೆ.
'ಇದರಿಂದ ಆಶ್ಚರ್ಯಗೊಂಡಿದ್ದ ಪ್ರಿಯಾಂಕಾ, ರಾಹುಲ್ ಗಾಂಧಿ ಜೊತೆ ಮಾತನಾಡುತ್ತಿಲ್ಲವೇ ಎಂದು ಪ್ರಶ್ನಿಸಿದ್ದರು. ನಾನು ಪಕ್ಷದಿಂದ ಅಮಾನತುಗೊಂಡಿದ್ದೆ, ಹೀಗಾಗಿ ನನ್ನ ನಾಯಕರನ್ನು ನೋಡಲಾಗುತ್ತಿಲ್ಲ ಎಂದು ಉತ್ತರಿಸಿದ್ದೆ ' ಎಂದಿದ್ದಾರೆ.
'ರಾಹುಲ್ ಗಾಂಧಿಗೆ ಪತ್ರ ಬರೆದಿದ್ದೆ. ಒಕ್ಕಣೆಯಲ್ಲಿ ಜನ್ಮದಿನದ ಶುಭಾಶಯ ಕೋರಿದ್ದೆ. ಬಳಿಕ ಪಕ್ಷದಲ್ಲಿ ನನ್ನ ಸ್ಥಾನ ಏನು ಎನ್ನುವುದನ್ನೂ ಪ್ರಶ್ನಿಸಿದ್ದೆ' ಎಂದು ಹೇಳಿದ್ದಾರೆ. ಆದರೆ ಈವರೆಗೂ ಆ ಪತ್ರಕ್ಕೆ ಉತ್ತರ ಬಂದಿಲ್ಲ. ಅಮಾನತು ಮಾಡಿದ ಅದೇ ವರ್ಷ ಅಮಾನತ್ತನ್ನು ಹಿಂಪಡೆಯಲಾಗಿತ್ತು ಎಂದೂ ನೆನಪಿಸಿಕೊಂಡಿದ್ದಾರೆ.
ನಾನು ಕ್ರಿಶ್ಚಿಯನ್ ಅಲ್ಲ ಎಂದಿದ್ದ ಸೋನಿಯಾ
ಸೋನಿಯಾ ಗಾಂಧಿಯೊಂದಿಗೆ ಒಂದು ಭೇಟಿಯ ಅನುಭವವನ್ನೂ ಅಯ್ಯರ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. 'ಒಂದು ದಿನ ಸೋನಿಯಾ ಗಾಂಧಿಯವರಿಗೆ ಕ್ರಿಸ್ಮಸ್‌ಗೆ ಶುಭಕೋರಿದ್ದೆ. ನಾನು ಕ್ರಿಶ್ಚಿಯನ್ ಅಲ್ಲ ಎಂದು ಅವರು ಹೇಳಿದ್ದರು. ಇದರಿಂದ ನಾನು ಆಶ್ಚರ್ಯಗೊಂಡಿದ್ದೆ' ಎಂದಿದ್ದಾರೆ. ಅಲ್ಲದೇ ಅವರು ಯಾವತ್ತೂ ತನ್ನನ್ನು ತಾನು ಕ್ರಿಶ್ಚಿಯನ್ ಎಂದು ಅಂದುಕೊಂಡಿದ್ದಾಗಿ ನಾನು ಗಮನಿಸಿಲ್ಲ ಎಂದು ಅಯ್ಯರ್ ಹೇಳಿದ್ದಾರೆ.
ತಮ್ಮ ಧಾರ್ಮಿಕ ನಿಲುವುಗಳ ಬಗ್ಗೆ ಮಾತನಾಡಿರುವ ಅವರು, 'ನಾನು ಯಾವುದೇ ಒಂದು ಧರ್ಮದ ಪರವಾಗಿ ಗುರುತಿಸಿಕೊಂಡಿಲ್ಲ. ನನಗೆ ಧರ್ಮದ ಬಗ್ಗೆ ನಂಬಿಕೆ ಇಲ್ಲ. ಅದನ್ನು ನಾನು ಮುಕ್ತವಾಗಿಯೇ ಹೇಳಿಕೊಳ್ಳುತ್ತೇನೆ. ಅದರರ್ಥ ನಾನು ಧರ್ಮಗಳನ್ನು ಗೌರವಿಸುವುದಿಲ್ಲ ಎಂದಲ್ಲ. ನಾನು ಎಲ್ಲಾ ಧರ್ಮವನ್ನೂ ಸಮಾನವಾಗಿ ಕಾಣುತ್ತೇನೆ' ಎಂದಿದ್ದಾರೆ.
ಹೊಸ ಪುಸ್ತಕ
ಮಣಿಶಂಕರ್ ಅಯ್ಯರ್ ಅವರ ಹೊಸ ಪುಸ್ತಕ 'ಎ ಮ್ಯಾವೆರಿಕ್ ಇನ್ ಪಾಲಿಟಿಕ್ಸ್' (A Maverick in Politics) ಪುಸ್ತಕದಲ್ಲಿ ಈ ವಿಷಯಗಳನ್ನು ದಾಖಲಿಸಿದ್ದು, ಅದರ ಕುರಿತಾಗಿ ಪಿಟಿಐ ಜೊತೆಗೆ ಮಾತನಾಡಿದ್ದಾರೆ. ಭಾರತದ ರಾಜಕೀಯದಲ್ಲಿ ತಮ್ಮ ಪ್ರಯಾಣದ ಕುರಿತು ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದಾರೆ.
ರಾಜಕೀಯ ಪ್ರವೇಶ, ಮಾಜಿ ಪ್ರಧಾನಿ ನರಸಿಂಹ ರಾವ್ ಜೊತೆಗಿನ ಒಡನಾಟ, ಯುಪಿಎ ಸರ್ಕಾರದ ಎರಡು ಅವಧಿಯಲ್ಲಿ ಮಂತ್ರಿಯಾಗಿ ಅನುಭವ, ರಾಜಕೀಯ ಉತ್ತುಂಗ, ಇಳಿಮುಖ.. ಹೀಗೆ ಎಲ್ಲವನ್ನೂ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಭಾರತೀಯ ವಿದೇಶಾಂಗ ಸೇವೆಯಲ್ಲಿ ಅಧಿಕಾರಿಯಾಗಿದ್ದ ಮಣಿಶಂಕರ್ ಅಯ್ಯರ್, 10,13 ಹಾಗೂ 14ನೇ ಲೋಕಸಭೆ ಅವಧಿಯಲ್ಲಿ ತಮಿಳುನಾಡಿನ ಮೈಲಾಡುದುರೈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ರಾಜ್ಯಸಭೆಯ ಸಂಸದರೂ ಆಗಿದ್ದರು.