ನವದೆಹಲಿ: ಈ ವರ್ಷ ದೇಶದಾದ್ಯಂತ ನಕ್ಸಲ್ ಚಟುವಟಿಕೆಗಳು ತೀವ್ರ ಇಳಿಕೆ ದಾಖಲಿಸಿದ್ದು, 2023ಕ್ಕೆ ಹೋಲಿಸಿದರೆ ಭದ್ರತಾ ಪಡೆಗಳ ಸಾವಿನ ಸಂಖ್ಯೆಯಲ್ಲಿ ಶೇಕಡಾ 25ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಬಿಡುಗಡೆಗೊಳಿಸಿದ ಅಂಕಿ-ಅಂಶಗಳಿಂದ ದೃಢಪಟ್ಟಿದೆ.
ಕಳೆದ ವಾರ ರಾಜ್ಯಸಭೆ, ಲೋಕಸಭೆಯಲ್ಲಿ ಸದಸ್ಯರಿಗೆ ಕೇಳಿದ ಪ್ರಶ್ನೆಗೆ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರಾಯ್ ಅವರು ಈ ಮಾಹಿತಿ ನೀಡಿದ್ದಾರೆ. ರಾಜ್ಯಸಭಾ ಸಂಸದ ಪರಿಮಾಳ್ ನಾಥವಾನಿ ಹಾಗೂ ಲೋಕಸಭಾ ಸಂಸದರಾದ ಅನಿಲ್ ಬಲುನಿ, ಕಿರ್ಸಾನ್ ನಾಮ್‌ದೇವ್ ಈ ವಿಚಾರವಾಗಿ ಪ್ರಶ್ನೆ ಕೇಳಿದ್ದರು.
'ಎಡಪಂಥೀಯ ತೀವ್ರವಾದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಹಾಗೂ ಕಾರ್ಯಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ಪರಿಣಾಮ ಹಿಂಸಾಚಾರ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು, ಭೌಗೋಳಿಕವಾಗಿ ಚಟುವಟಿಕೆಗಳ ವ್ಯಾಪ್ತಿಯೂ ಕುಗ್ಗಿದೆ' ಎಂದು ವಿವರಿಸಿದರು.
2010ಕ್ಕೆ ಹೋಲಿಸಿದರೆ, ನಕ್ಸಲ್ ಹಿಂಸಾಚಾರದ ಪ್ರಮಾಣದಲ್ಲಿ ಶೇ 73ರಷ್ಟು ಇಳಿದಿದ್ದು, ನಾಗರಿಕರು ಹಾಗೂ ಭದ್ರತಾಪಡೆಗಳ ಸಾವಿನ ಸಂಖ್ಯೆಯಲ್ಲಿಯೂ ಶೇ 86ರಷ್ಟು ಇಳಿಕೆಯಾಗಿದೆ. 2010ರಲ್ಲಿ 1,005 ಮಂದಿ ಮೃತಪಟ್ಟಿದ್ದು, 2023ಕ್ಕೆ 138ಕ್ಕೆ ಇಳಿಕೆಯಾಗಿದೆ. 2010ರಲ್ಲಿ ದೇಶದ 10 ರಾಜ್ಯಗಳ ಪೈಕಿ 126 ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಯ ವ್ಯಾಪ್ತಿ ಹೊಂದಿದ್ದರೆ, ಈಗ ದೇಶದ 9 ರಾಜ್ಯ 38 ಜಿಲ್ಲೆಗೆ ಸೀಮಿತವಾಗಿದೆ. ಛತ್ತೀಸ್‌ಗಢದ 15, ಒಡಿಶಾದ 7, ಜಾರ್ಖಂಡ್‌ನ 5, ಮಧ್ಯಪ್ರದೇಶದಲ್ಲಿ 3, ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿ ತಲಾ 2 ಹಾಗೂ ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದ 1 ಜಿಲ್ಲೆಯಲ್ಲಿ ಮಾತ್ರ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿದೆ ಎಂದು ರಾಯ್ ವಿವರಿಸಿದರು.
ಛತ್ತೀಸ್‌ಗಢದಲ್ಲಿ ಗರಿಷ್ಠ: ಈ ವರ್ಷ 299 ನಕ್ಸಲ್ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದು, ಛತ್ತೀಸ್‌ಗಢ (206), ಜಾರ್ಖಂಡ್ (60), ಮಹಾರಾಷ್ಟ್ರ (10) ಪ್ರಕರಣಗಳು ವರದಿಯಾಗಿವೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಉಳಿದ ರಾಜ್ಯಗಳಲ್ಲಿಒಂದಂಕಿ ಪ್ರಕರಣಗಳು ನಡೆದಿವೆ. ನಕ್ಸಲ್ ಹಿಂಸಾಚಾರ ಪ್ರಕರಣಗಳು 2010ರಲ್ಲಿ 465 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದರೆ, 2023ರಲ್ಲಿ 171ಕ್ಕೆ ಇಳಿಕೆಯಾಗಿದೆ ಎಂದು ವಿವರಿಸಿದರು.