HEALTH TIPS

'ಲಾಟರಿ ರಾಜ' ಪ್ರಕರಣ | ಎಲೆಕ್ಟ್ರಾನಿಕ್ ಸಾಧನ ಪರಿಶೀಲನೆಗೆ ನಿರ್ಬಂಧ: 'ಸುಪ್ರೀಂ'

ನವದೆಹಲಿ: 'ಲಾಟರಿ ರಾಜ' ಎಂಬ ಅಡ್ಡಹೆಸರು ಹೊತ್ತಿರುವ ಸ್ಯಾಂಟಿಯಾಗೊ ಮಾರ್ಟಿನ್‌, ಅವರ ಸಂಬಂಧಿಕರು ಮತ್ತು ನೌಕರರಿಂದ ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಇರುವ ವಸ್ತು-ವಿಷಯಗಳನ್ನು ಇನ್ನೊಂದು ಸಾಧನಕ್ಕೆ ನಕಲು ಮಾಡಿಕೊಳ್ಳುವಂತಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಡಿಸೆಂಬರ್‌ 13ರ ಆದೇಶದಲ್ಲಿ ಕೋರ್ಟ್ ಈ ಸೂಚನೆ ನೀಡಿದೆ. ಮಾರ್ಟಿನ್ ಹಾಗೂ ಇತರರು (ಫ್ಯೂಚರ್ ಗೇಮಿಂಗ್ ಆಯಂಡ್‌ ಹೊಟೆಲ್ಸ್ ಸರ್ವಿಸಸ್ ಪ್ರೈ.ಲಿ.) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ. ಇದರ ಪರಿಣಾಮವಾಗಿ ತನಿಖಾ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಆರೋಪಿಗಳ ಮೊಬೈಲ್‌ ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳುವ ತಿರ್ಮಾನಕ್ಕೆ ಬರುವ ಮೊದಲು ಎರಡು ಬಾರಿ ಆಲೋಚನೆ ನಡೆಸುವ ಸಾಧ್ಯತೆ ಇದೆ.

ಮಾರ್ಟಿನ್ ಅವರ ಮೊಬೈಲ್‌ ಫೋನ್‌ ಹಾಗೂ ನೌಕರರ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಇರುವ ವಸ್ತು-ವಿಷಯಗಳನ್ನು ಇ.ಡಿ. ಅಧಿಕಾರಿಗಳು ತಾವು ಪಡೆದುಕೊಳ್ಳುವಂತೆಯೂ ಇಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಪಂಕಜ್ ಮಿತ್ತಲ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

ಕೇಂದ್ರ ಸರ್ಕಾರ, ಇ.ಡಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ಪೀಠವು ಅರ್ಜಿಗಳ ವಿಚಾರಣೆಯನ್ನು, ಇದೇ ವಿಷಯವಾಗಿ ಬಾಕಿ ಇರುವ ಇತರ ಅರ್ಜಿಗಳ ಜೊತೆ ವಿಚಾರಣೆಗಾಗಿ ಫೆಬ್ರುವರಿ 17ಕ್ಕೆ ಮುಂದೂಡಿದೆ. ಅಮೆಜಾನ್‌ ಇಂಡಿಯಾ ಕಂಪನಿಯ ನೌಕರರು ಸಲ್ಲಿಸಿರುವ ಅರ್ಜಿ ಹಾಗೂ ನ್ಯೂಸ್‌ಕ್ಲಿಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅ‌ರ್ಜಿಗಳ ವಿಚಾರಣೆ ಬಾಕಿ ಇದೆ. ಈ ಅರ್ಜಿಗಳನ್ನು ಸಲ್ಲಿಸಿರುವವರು, ಡಿಜಿಟಲ್ ಉಪಕರಣಗಳನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆಯುವ ವಿಚಾರವಾಗಿ ಮಾರ್ಗಸೂಚಿಗಳ ಅಗತ್ಯ ಇದೆ ಎಂದು ಹೇಳಿದ್ದಾರೆ.

ಆದೇಶವನ್ನು ತಾವು ಗಮನಿಸಿರುವುದಾಗಿ, ಮಾರ್ಟಿನ್‌ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಡಿಜಿಟಲ್ ದಾಖಲೆಗಳು ಮಾತ್ರವೇ ಅಲ್ಲದೆ ಇತರ ಪ್ರಬಲ ಸಾಕ್ಷ್ಯಗಳೂ ಇವೆ ಎಂಬುದಾಗಿ ಇ.ಡಿ ಮೂಲಗಳು ಹೇಳಿವೆ.

ಎಲೆಕ್ಟ್ರಾನಿಕ್‌ ಸಾಧನಗಳನ್ನು ಪರಿಶೀಲಿಸಲು ಯಾವ ನಿರ್ಬಂಧವೂ ಇಲ್ಲದಿರುವುದರಿಂದ ಖಾಸಗಿತನ ಮತ್ತು ಮೂಲಭೂತ ಹಕ್ಕುಗಳ ಹರಣವಾಗುತ್ತದೆ ಎಂದು ಫ್ಯೂಚರ್ ಗೇಮಿಂಗ್ ಪರ ವಕೀಲರು ವಾದಿಸಿದ್ದರು. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹಣಕಾಸಿನ ವಿವರಗಳು, ವೈದ್ಯಕೀಯ ದಾಖಲೆಗಳು, ಪಾಸ್‌ವರ್ಡ್‌ಗಳು ಸೇರಿದಂತೆ ತೀರಾ ಖಾಸಗಿಯಾದ ಮಾಹಿತಿಗಳು ಹಾಗೂ ಉದ್ಯಮಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಇರುತ್ತವೆ ಎಂದು ವಕೀಲರು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries