ನ್ಯೂಯಾರ್ಕ್: ತಮ್ಮ ನಡುವಿನ ಸಂಬಂಧದ ಕುರಿತು ಸಾರ್ವಜನಿಕವಾಗಿ ಮಾತನಾಡದಂತೆ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ 1.30 ಲಕ್ಷ ಡಾಲರ್ (ಸುಮಾರು ₹1.10 ಕೋಟಿ) ನೀಡಿದ್ದ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಲಾಗಿತ್ತು.
ಇದನ್ನು ರದ್ದು ಮಾಡುವಂತೆ ಕೋರಿ ಟ್ರಂಪ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಇಲ್ಲಿನ ನ್ಯಾಯಾಲಯ ವಜಾ ಮಾಡಿದೆ.
'ತಮ್ಮ ಅಧಿಕಾರ ಅವಧಿಯಲ್ಲಿ ಆಡಳಿತಕ್ಕೆ ಸಂಬಂಧಿಸಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಜಿ ಅಧ್ಯಕ್ಷರಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಆ ನಿರ್ಧಾರಗಳು ಆಡಳಿತಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಅವು ವೈಯಕ್ತಿಕವಾಗಿ ತೆಗೆದುಕೊಂಡು ನಿರ್ಧಾರ ಆಗಿರುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದಲ್ಲಿ, ಟ್ರಂಪ್ ಅವರು ಶಿಕ್ಷೆ ವಜಾ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ತಾವು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಈ ಪ್ರಕರಣ ರದ್ದಾಗಲಿದೆ ಎಂದುಕೊಂಡಿದ್ದ ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಅವರಿಗೆ ಮ್ಯಾನ್‌ಹ್ಯಾಟನ್ ನ್ಯಾಯಾಧೀಶ ಜಾನ್ ಎಂ. ಮರ್ಚನ್ ಅವರು ನೀಡಿರುವ ತೀರ್ಪು ನಿರಾಸೆಯನ್ನುಂಟು ಮಾಡಿದೆ.
'ಟ್ರಂಪ್ ಅವರು ಜ.20ರಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದರಿಂದ ಈ ಪ್ರಕರಣದ ಸಂಬಂಧ ಅವರಿಗೆ ತುಸು ವಿನಾಯಿತಿ ನೀಡಬಹುದು. ಆದರೆ, ಶಿಕ್ಷೆಯನ್ನು ರದ್ದು ಮಾಡುವಂತಿಲ್ಲ' ಎಂದು ಟ್ರಂಪ್ ವಿರುದ್ಧ ವಾದಿಸುತ್ತಿರುವ ವಕೀಲರು ಕೋರಿದರು.
'ನನ್ನ ವಿರುದ್ಧ ಸಲ್ಲಿಸಲಾಗಿರುವ ದಾಖಲೆಗಳೆಲ್ಲವೂ ಆಡಳಿತಕ್ಕೆ ಸಂಬಂಧಿಸಿದ್ದಾಗಿವೆ. ಸುಪ್ರೀಂ ಕೋರ್ಟ್ ಹೇಳಿರುವಂತೆ ಅದು ಆಡಳಿತದ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರವಾಗಿರುವುದರಿಂದ ಶಿಕ್ಷೆಯನ್ನು ರದ್ದು ಮಾಡಬೇಕು' ಎಂದು ಅರ್ಜಿಯಲ್ಲಿ ಕೋರಿದ್ದರು. ಆದರೆ, ನ್ಯಾಯಾಧೀಶರು ಟ್ರಂಪ್ ಅವರ ಈ ವಾದವನ್ನು ಒಪ್ಪಿಕೊಳ್ಳಲಿಲ್ಲ.
2016ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಕೊನೇ ಹಂತದಲ್ಲಿ ಟ್ರಂಪ್ ಅವರು ನಟಿಗೆ ಹಣ ನೀಡಿದ್ದರು. ತಮ್ಮ ಮೇಲಿನ ಆರೋಪಗಳನ್ನು ಟ್ರಂಪ್ ಅವರು ಈ ಹಿಂದೆಯೂ ತಳ್ಳಿ ಹಾಕಿದ್ದರು. ನನ್ನ ಹಾಗೂ ನಟಿ ಮಧ್ಯೆ ಲೈಂಗಿಕ ಸಂಬಂಧ ಏರ್ಪಟ್ಟಿರಲಿಲ್ಲ ಎಂದೂ ಟ್ರಂಪ್ ಹೇಳಿದ್ದರು.