ನವದೆಹಲಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಷಯವನ್ನು ಕೇಂದ್ರ ಸರ್ಕಾರವು ಅಲ್ಲಿನ ಸರ್ಕಾರದ ಜತೆ ಪ್ರಸ್ತಾಪಿಸಬೇಕು ಎಂದು ವಯನಾಡ್ ನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಲೋಕಸಭೆಯಲ್ಲಿ ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 'ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಈ ವಿಷಯವನ್ನು ಪ್ರಸ್ತಾಪಿಸಿ ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಬೇಕು ಮತ್ತು ಅಲ್ಲಿ ಸಂಕಷ್ಟದಲ್ಲಿರುವ ಅಲ್ಪಸಂಖ್ಯಾತರ ಪರ ನಿಲ್ಲಬೇಕು' ಎಂದು ಹೇಳಿದರು.
ಸೇನೆಯ ಕಚೇರಿಯಲ್ಲಿ ಚಿತ್ರ ಮತ್ತೆ ಪ್ರದರ್ಶಿಸಬೇಕು: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತೀಯ ಸೇನೆಯ ತ್ಯಾಗವನ್ನು ಸ್ಮರಿಸಿದ ಪ್ರಿಯಾಂಕಾ, 'ಆ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯು ಭಾರತದ ಸೇನೆಗೆ ಶರಣಾಗುತ್ತಿರುವ ಚಿತ್ರವೊಂದು ಸೇನೆಯ ಪ್ರಧಾನ ಕಚೇರಿಯಲ್ಲಿತ್ತು. ಆ ಚಿತ್ರವನ್ನು ಅಲ್ಲಿಂದ ತೆರವುಗೊಳಿಸಲಾಗಿದ್ದು, ಅದನ್ನು ಮತ್ತೆ ಹಾಕಬೇಕು' ಎಂದು ಸರ್ಕಾರವನ್ನು ಒತ್ತಾಯಿಸಿದರು.
1971ರ ಯುದ್ಧದ ಬಗ್ಗೆ ಮಾತನಾಡಲು ತಮಗೆ ಸಾಕಷ್ಟು ಸಮಯ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಆ ಬಳಿಕ ಸದನದಿಂದ ಹೊರನಡೆದರು.