ಲಂಡನ್: ಈಶಾನ್ಯ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಂದ ಅಪರಾಧದಡಿ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್ ಕೌರ್ ಅವರ ಮೃತದೇಹವನ್ನು ಪತ್ತೆ ಮಾಡಿದ್ದ ಪೊಲೀಸರು ಸಂದೀಪ್ ಸಿಂಗ್ ಅವರನ್ನು ಬಂಧಿಸಿದ್ದರು.
ಭಜನ್ ಕೌರ್ ಅವರ ಮುಖ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿರುವುದು ಕಂಡುಬಂದಿತ್ತು.
16 ದಿನಗಳ ಸತತ ವಿಚಾರಣೆಯಲ್ಲಿ ಸಂದೀಪ್ ಸಿಂಗ್ ದೋಷಿ ಎಂದು ಲೀಸೆಸ್ಟರ್ ಕ್ರೋನ್ ನ್ಯಾಯಾಲಯ ತೀರ್ಮಾನಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. 31 ವರ್ಷಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಸಂದೀಪ್ ಪೆರೋಲ್‌ಗೆ ಅರ್ಹರಾಗುತ್ತಾರೆ.
'ಇದು ಅತ್ಯಂತ ವಿಚಲಿತಗೊಳಿಸುವ ಪ್ರಕರಣವಾಗಿದ್ದು, ತಮ್ಮ ತಪ್ಪು ಮುಚ್ಚಿಡಲು ಸಿಂಗ್ ಬಹಳ ಯೋಜನೆ ಮಾಡಿದ್ದರು'ಎಂದು ಡಿಟೆಕ್ಟಿವ್ ಚೀಫ್ ಇನ್ಸ್‌ಪೆಕ್ಟರ್ ಮಾರ್ಕ್ ಸಿನ್ಸಿಕಿ ತಿಳಿಸಿದ್ಧಾರೆ.
'ತನ್ನ ತಾಯಿಯನ್ನು ಕೊಂದ ನಂತರ, ಸಿಂಗ್ ಹೊರಗೆ ಹೋಗಿ ಗೋಣಿಚೀಲ ಮತ್ತು ಗುದ್ದಲಿಯನ್ನು ಖರೀದಿಸಿದ್ದರು. ತಾಯಿ ಕೌರ್ ಅವರ ಮೃತದೇಹವನ್ನು ತೋಟದಲ್ಲಿ ಹೂಳಲು ಉದ್ದೇಶಿಸಿದ್ದರು. ಆದರೆ, ಗೊಂದಲಕ್ಕೊಳಗಾಗಿ ಕೈಬಿಟ್ಟಿದ್ದರು. ಹತ್ಯೆ ಬಳಿಕ ಮನೆಯನ್ನು ಶುಚಿಗೊಳಿಸಲಾಗಿದೆ. ಸೋಂಕುನಿವಾರಕದ ವಾಸನೆ ಬರುತ್ತಿತ್ತು. ಹತ್ಯೆ ಮುಚ್ಚಿಡಲು ಸಿಂಗ್ ರೂಪಿಸಿದ್ದ ಯೋಜನೆಯನ್ನು ತೋರಿಸುವ ಸ್ಪಷ್ಟ ಪುರಾವೆಗಳಿವೆ' ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ಅಧಿಕಾರಿಗಳು ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ಸುಳ್ಳು ವಿವರಗಳನ್ನು ನೀಡಿದ್ದರು. ತಾಯಿ ಸಾವಿನ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದರು ಎಂದು ಡಿಟೆಕ್ಟಿವ್ ಹೇಳಿದ್ದಾರೆ.
ತಂದೆ ತಮಗೆ ಬಿಟ್ಟುಹೋಗಿದ್ದ ಮನೆಯ ಮಾಲೀಕತ್ವದ ವಿಚಾರವಾಗಿ ಜಗಳ ನಡೆದು, ಹತ್ಯೆ ನಡೆದಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.