ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಎಲ್ಲವನ್ನೂ ಸರ್ವನಾಶ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರರಾಗಿರುವ ಮೊಹಮ್ಮದ್ ಯೂನುಸ್ ಹೇಳಿದ್ದಾರೆ.
'ಸಾಂವಿಧಾನಿಕ ಹಾಗೂ ನ್ಯಾಯಾಂಗ ಸುಧಾರಣೆ ಆದ ಬಳಿಕವಷ್ಟೇ ದೇಶದಲ್ಲಿ ಚುನಾವಣೆ ನಡೆಸಲಾಗುವುದು' ಎಂದು ಯೂನುಸ್ ಅವರು ಜಪಾನ್‌ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ 'ಬಾಂಗ್ಲಾದೇಶ್ ಸಂಗ್‌ಬದ್ ಸಂಗ್‌ಸ್ಥಾ' ವರದಿ ಮಾಡಿದೆ.
'ಚುನಾವಣೆಗೂ ಮುನ್ನ ಆರ್ಥಿಕತೆ, ಆಡಳಿತ, ಆಧಿಕಾರಿ ವರ್ಗ ಹಾಗೂ ನ್ಯಾಯಾಂಗದಲ್ಲಿ ಅಮೂಲಾಗ್ರ ಬದಲಾವಣೆ ಬೇಕಿದೆ' ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಹಸೀನಾ ಅವರ ವಿಚಾರಣೆ ಮುಗಿದ ನಂತರ, ಅವರನ್ನು ಭಾರತ ಹಸ್ತಾಂತರಿಸಬೇಕು ಎಂದು ಯೂನುಸ್ ಪುನರುಚ್ಚರಿಸಿದ್ದಾರೆ.
'ವಿಚಾರಣೆ ಮುಕ್ತಾಯಗೊಂಡು, ತೀರ್ಪು ಪ್ರಕಟವಾದರೆ ಭಾರತದೊಂದಿಗೆ ನಾವು ಮತ್ತೆ ಮನವಿ ಮಾಡುತ್ತೇವೆ. ಉಭಯ ರಾಷ್ಟ್ರಗಳು ಅಂತರರಾಷ್ಟ್ರೀಯ ಕಾನೂನಿಗೆ ಸಹಿ ಹಾಕಿವೆ' ಎಂದು ಹೇಳಿದ್ದಾರೆ.
'ಇಲ್ಲಿನ ಹಿಂದೂಗಳ ಬಗ್ಗೆ ಭಾರತದ ಕಾಳಜಿಯು ವಾಸ್ತವಾಧಾರಿತವಾಗಿಲ್ಲ. ಸುಳ್ಳು ಪ್ರಚಾರ ಆಧಾರಿತವಾಗಿದೆ' ಎಂದಿದ್ದಾರೆ.