ಕಾಸರಗೋಡು: ನೀಲೇಶ್ವರದ ಪಳ್ಳಿಕೆರೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ಮಂಜೂರುಗೊಳಿಸದಿರುವುದರಿಂದ ಕಾಸರಗೋಡು ಅಪರ ಜಿಲ್ಲಾಧಿಕಾರಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾಞಂಗಾಡು ಸಬ್‍ಕೋರ್ಟು ಆದೇಶ ನೀಡಿದೆ.
ಇಲ್ಲಿನ ನಿವಾಸಿಗಳಾದ ಇ.ವಿ ಶಾಂತಾ ಹಾಗೂ ಇ.ವಿ ರಾಮ ಎಂಬವರ ಜಮೀನನ್ನು 2003ರಲ್ಲಿ ರೈಲ್ವೆ ಕಾಮಗಾರಿಗಾಗಿ ವಶಪಡಿಸಿಕೊಳ್ಳಲಾಗಿದ್ದು, ಪರಿಹಾರವಾಗಿ ಪ್ರತಿ ಸೆಂಟ್ ಜಾಗಕ್ಕೆ 2ಸಾವಿರ ರೂ. ನೀಡಲು ತೀರ್ಮಾನವಾಗಿತ್ತು. ಈ ಮೊತ್ತ ಕಡಿಮೆಯಾಗಿರುವುದಾಗಿ ತಿಳಿಸಿ ಇ.ವಿ ಶಾಂತಾ ಹಾಗೂ ಇ.ವಿ ರಾಮ ಅವರು ಹೊಸದುರ್ಗ ತಹಸೀಲ್ದಾರ್ ಮತ್ತು ಅಪರ ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ಪ್ರತಿವಾದಿಗಳನ್ನಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಲಯ 5.69ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ಕಲ್ಪಿಸಿ, ಆರು ತಿಂಗಳೊಳಗೆ ಹಣ ನೀಡುವಂತೆ ತಿಳಿಸಿತ್ತು. ತೀರ್ಪು ಹೊರಬಂದು ಒಂದುವರೆ ವರ್ಷ ಕಳೆದರೂ ಹಣ ಕೈಸೇರದಿರುವುದರಿಂದ ಅರ್ಜಿದಾರರು ಮತ್ತೆ ನ್ಯಾಯಾಲಯ ಸಮೀಪಿಸಿದಾಗ, ಬಡ್ಡಿ ಸೇರಿ ಒಟ್ಟು 13 67 379ರೂ. ಪರಿಹಾರ ಮಂಜೂರುಗೊಳಿಸುವಂತೆ ಆದೇಶಿಸಿದೆ. ಜತೆಗೆ ಕಾಞಂಗಾಡಿನಲ್ಲಿರುವ ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಅವರ ವಾಹನ ಮುಟ್ಟುಗೋಲುಹಾಕುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ವಾಃನವನ್ನು ನ್ಯಾಯಾಲಯ ವಠಾರಕ್ಕೆ ತಲುಪಿಸಲಾಗಿದೆ.