ಪ್ರಧಾನಿ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ ಕುವೈತ್‌ಗೆ ಬಂದಿಳಿದರು. ಕುವೈತ್‌ನ ರಾಜ ಶೇಕ್ ಮಿಶಾಲ್ ಅಲ್ ಅಹಮದ್ ಅಲ್ ಜಾಬೆರ್ ಸಬಾ ಅವರ ಆಮಂತ್ರಣದ ಮೇರೆಗೆ ಪ್ರಧಾನಿ, ಕುವೈತ್‌ಗೆ ತೆರಳಿದ್ದಾರೆ. ಇಲ್ಲಿನ ಭಾರತೀಯರ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರನ್ನು ಕುವೈತ್‌ನ ಉಪ ಪ್ರಧಾನಿ ಶೇಕ್ ಫಹಾದ್ ಯೂಸೆಫ್ ಸಾದ್ ಅಲ್ ಸಬಾ ಅವರು ಬರಮಾಡಿಕೊಂಡರು. 43 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡಿದ್ದಾರೆ. 1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇಲ್ಲಿಗೆ ಭೇಟಿ ನೀಡಿದ್ದರು.
'ಭಾರತದಿಂದ ಇಲ್ಲಿಗೆ ಬರಲು ನಾಲ್ಕು ಗಂಟೆಗಳು ಬೇಕು. ಆದರೆ, ಭಾರತದ ಪ್ರಧಾನಿಯೊಬ್ಬರು ಇಲ್ಲಿಗೆ ಬರಲು ನಾಲ್ಕ ದಶಕಗಳೇ ಬೇಕಾದವು. ಭಾರತದ ಮೂಲೆ ಮೂಲೆಗಳಿಂದ ನೀವು ಇಲ್ಲಿಗೆ ಬಂದು ನೆಲೆಸಿದ್ದೀರಿ. ಆದರೆ, ಈಗ ನಿಮ್ಮನ್ನು ಇಲ್ಲಿ ಒಟ್ಟಿಗೆ ನೋಡಿದರೆ ಮಿನಿ ಭಾರತವೇ ಸಮಾವೇಶಗೊಂಡಂತಿದೆ. ನೀವು ಕುವೈತ್ ಸಮಾಜಕ್ಕೆ ಭಾರತೀಯ ಸ್ಪರ್ಶ ನೀಡಿದ್ದೀರಿ' ಎಂದು ಹರ್ಷ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಭಾರತ-ಕುವೈತ್ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಕುವೈತ್‌ನ ನಾಯಕರೊಂದಿಗೆ ಪ್ರಧಾನಿ ಅವರು ಮಾತುಕತೆ ನಡೆಸಲಿದ್ದಾರೆ. ಕುವೈತ್‌ನ ಒಟ್ಟು ಜನಸಂಖ್ಯೆಯಲ್ಲಿ ಶೇ 21ರಷ್ಟು ಜನರು ಭಾರತೀಯರಾಗಿದ್ದಾರೆ.
'ರಾಮಾಯಣ' ಹಾಗೂ 'ಮಹಾಭಾರತ' ಮಹಾಕಾವ್ಯವನ್ನು ಅರಬಿಕ್ ಭಾಷೆಗೆ ಅನುದಾನ ಮಾಡಿದ ಅಬ್ದುಲ್ಲಾ ಅಲ್ ಬರೌನ್ ಹಾಗೂ ಅಬ್ದುಲ್ ಲತೀಫ್ ಅಲ್ ನಿಸೀಫ್ ಅವರನ್ನು ಪ್ರಧಾನಿ ಮೋದಿ ಶನಿವಾರ ಭೇಟಿ ಮಾಡಿದರು. ಅನುವಾದಿತ ಪುಸ್ತಕಗಳನ್ನು ಈ ಇಬ್ಬರೇ ಪ್ರಕಾಶನ ಕೂಡ ಮಾಡಿದ್ದಾರೆ. ಇದೇ ಅಕ್ಟೋಬರ್‌ನ ತಮ್ಮ 'ಮನದ ಮಾತು' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಈ ಇಬ್ಬರ ಕುರಿತು ಉಲ್ಲೇಖ ಮಾಡಿದ್ದರು.
ಪ್ರವಾಸ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, 'ಕುವೈತ್‌ನೊಂದಿಗೆ ನಮಗೆ ಚಾರಿತ್ರಿಕವಾದ ಸಂಬಂಧವಿದೆ. ಈ ಸಂಬಂಧವು ಹಲವು ಪೀಳಿಗೆಗಳಿಂದಲೂ ನಡೆದುಕೊಂಡು ಬಂದಿದೆ. ಇಂಧನ, ವ್ಯಾಪಾರಗಳಿಗಷ್ಟೇ ನಮ್ಮ ಸಂಬಂಧ ಸೀಮಿತಗೊಂಡಿಲ್ಲ. ಶಾಂತಿ, ಭದ್ರತೆ, ಸ್ಥಿರತೆ ಹಾಗೂ ಸಮೃದ್ಧಿಯನ್ನೂ ಪರಸ್ಪರ ಹಂಚಿಕೊಂಡಿದ್ದೇವೆ' ಎಂದರು.