ನವದೆಹಲಿ: ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಹತ್ತಿರದ ಸಂಬಂಧಿಗಳನ್ನು ನೇಮಕಾತಿಗೆ ಪರಿಗಣಿಸದೆ ಇರುವ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಹಿರಿಯ ನ್ಯಾಯಮೂರ್ತಿಯೊಬ್ಬರು ಈ ಪ್ರಸ್ತಾವ ಇರಿಸಿದ್ದಾರೆ ಎಂದು ಗೊತ್ತಾಗಿದೆ. ಇದು ಜಾರಿಗೆ ಬಂದಲ್ಲಿ, ನೇಮಕಾತಿಗಳಲ್ಲಿ ಹೆಚ್ಚಿನ ಪ್ರಮಾಣದ ಒಳಗೊಳ್ಳುವಿಕೆ ಸಾಧ್ಯವಾಗಲಿದೆ. ನ್ಯಾಯಾಂಗದ ನೇಮಕಾತಿಗಳಲ್ಲಿ ಪ್ರತಿಭಾವಂತರಿಗಿಂತ ಹೆಚ್ಚಿನ ಆದ್ಯತೆಯು ಕೆಲವರಿಗೆ ಸಿಗುತ್ತದೆ ಎಂಬ ಭಾವನೆಯನ್ನು ಅಳಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ಹೇಳಿವೆ.
ಅಭ್ಯರ್ಥಿಗಳ ತಂದೆ, ತಾಯಿ ಅಥವಾ ಹತ್ತಿರದ ಸಂಬಂಧಿಕರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಹಾಲಿ, ನಿವೃತ್ತ ನ್ಯಾಯಮೂರ್ತಿ ಆಗಿದ್ದಲ್ಲಿ, ಅಂತಹ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಬಾರದು ಎಂಬ ಸೂಚನೆಯನ್ನು ಹೈಕೋರ್ಟ್‌ನ ಕೊಲಿಜಿಯಂಗಳಿಗೆ ರವಾನಿಸುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಪರಿಶೀಲಿಸಬಹುದು ಎಂದು ಮೂಲಗಳು ಹೇಳಿವೆ.
ಈ ಪ್ರಸ್ತಾವ ಜಾರಿಗೆ ಬಂದರೆ, ಕೆಲವು ಅರ್ಹ ಅಭ್ಯರ್ಥಿಗಳು ನೇಮಕಾತಿಯಿಂದ ಅನರ್ಹಗೊಳ್ಳಬಹುದು. ಆದರೆ ಇದರಿಂದ ಮೊದಲ ತಲೆಮಾರಿನ ವಕೀಲರಿಗೆ ಅವಕಾಶಗಳನ್ನು ತೆರೆದಂತಾಗುತ್ತದೆ ಮತ್ತು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ವಿಭಿನ್ನ ಸಮುದಾಯಗಳ ಪ್ರಾತಿನಿಧ್ಯವನ್ನು ಹೆಚ್ಚು ಮಾಡಲು ಆಗುತ್ತದೆ ಎಂದು ನ್ಯಾಯಮೂರ್ತಿಯೊಬ್ಬರು ಪ್ರತಿಪಾದಿಸಿದ್ದಾರೆ.
ಆದರೆ ಈ ಕ್ರಮದ ಪರಿಣಾಮವಾಗಿ, ಅರ್ಹ ಅಭ್ಯರ್ಥಿಗೆ ಅವರು ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಸಂಬಂಧಿ ಎಂಬ ಕಾರಣಕ್ಕೇ ನ್ಯಾಯಮೂರ್ತಿ ಹುದ್ದೆಯು ನಿರಾಕರಣೆ ಆಗಬಹುದು ಎಂದು ಮೂಲಗಳು ಹೇಳಿವೆ.