ಭೋಪಾಲ್: ಮಧ್ಯಪ್ರದೇಶದ ಖಜುರಾಹೊದಲ್ಲಿ ಕೆನ್-ಬೆಟ್ವಾ ನದಿಗಳ ಜೋಡಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರ ತೇಲುವ ಸೌರ ಯೋಜನೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ಉದ್ಘಾಟಿಸಿದರು.
ಕೆನ್-ಬೆಟ್ವಾ ನದಿಗಳ ಜೋಡಣೆ ಯೋಜನೆಯಿಂದ ವಾರ್ಷಿಕ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಮಧ್ಯಪ್ರದೇಶದ ಮತ್ತು ಉತ್ತರ ಪ್ರದೇಶದ ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಜತೆಗೆ, 103 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಯೋಜನೆಗೆ ಸುಮಾರು ₹44,605 ಕೋಟಿ ವೆಚ್ಚವಾಗುತ್ತದೆ ಎನ್ನಲಾಗಿದೆ.
ಈ ಯೋಜನೆಯು ನೀರಿನ ಕೊರತೆಯಿಂದ ಬಳಲುತ್ತಿರುವ ಬುಂದೇಲ್‌ಖಂಡ್‌ನ ಪ್ರದೇಶಕ್ಕೆ, ವಿಶೇಷವಾಗಿ ಪನ್ನಾ, ಟಿಕಮ್‌ಗಡ, ಛತ್ತರ್‌ಪುರ್, ಸಾಗರ್, ದಮೋಹ್, ದಾಟಿಯಾ, ವಿದಿಶಾ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್ ಮತ್ತು ಉತ್ತರ, ಬಾಂಡಾ, ಮಹೋಬಾ, ಝಾನ್ಸಿ ಮತ್ತು ಲಲಿತಪುರ ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎಂದು ತಿಳಿದು ಬಂದಿದೆ.
ಮಾಜಿ ಪ್ರಧಾನಿ ದಿವಗಂತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅಂಚೆಚೀಟಿ ಮತ್ತು ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು.