ನವದೆಹಲಿ: ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳು ಸಲ್ಲಿಸುವ ನಡವಳಿಕೆ, ಪೂರ್ವಾಪರ, ರಾಷ್ಟ್ರೀಯತೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯನ್ನು ನೇಮಕಾತಿ ನಡೆದ ಆರು ತಿಂಗಳ ಒಳಗಾಗಿ ನಡೆಸುವಂತೆ ಎಲ್ಲ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಮತ್ತು ಆರ್.ಮಹದೇವನ್ ಅವರನ್ನು ಒಳಗೊಂಡ ನ್ಯಾಯಪೀಠವು ಡಿಸೆಂಬರ್ 5ರಂದು ಈ ಆದೇಶ ಹೊರಡಿಸಿದೆ. ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಬಳಿಕವಷ್ಟೇ ಸರ್ಕಾರಿ ಹುದ್ದೆಯನ್ನು ಖಚಿತಪಡಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಹಾಯಕ ನೇತ್ರ ತಜ್ಞರೊಬ್ಬರನ್ನು ನಿವೃತ್ತಿ ಪಡೆಯುವ ಎರಡು ತಿಂಗಳ ಮೊದಲು ಕೆಲಸದಿಂದ ತೆಗೆದುಹಾಕಿದ್ದ ನಿರ್ಧಾರವನ್ನು ವಜಾಗೊಳಿಸಿ ಕೋರ್ಟ್ ಈ ಆದೇಶ ನೀಡಿದೆ.
ಅರ್ಜಿದಾರರು 1985 ಮಾರ್ಚ್ 6ರಂದು ಸರ್ಕಾರಿ ಹುದ್ದೆಗೆ ಸೇರಿದ್ದರು. ಆದರೆ ಪೊಲೀಸರು, 2010 ಜುಲೈ 7ರಂದು ಇಲಾಖೆಗೆ ಪರಿಶೀಲನಾ ವರದಿ ಸಲ್ಲಿಸಿದ್ದರು. ಅದರಲ್ಲಿ ಅಬ್ಯರ್ಥಿಯು ದೇಶದ ನಿವಾಸಿ ಅಲ್ಲ ಎಂದು ಹೇಳಲಾಗಿತ್ತು. ಈ ಆಧಾರದಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.