ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಮತ್ತು ಹಿಂದೂ ನಾಯಕ ಚಿನ್ಮಯಿ ಕೃಷ್ಣದಾಸ್ ಅವರ ಬಿಡುಗಡೆಗೆ ಆಗ್ರಹಿಸಿ ಸುಮಾರು 1,000 ಸಾಧುಗಳು ಪಶ್ಚಿಮ ಬಂಗಾಳದ ದಕ್ಷಿಣ ಪರಗಣ 24 ಜಿಲ್ಲೆಯ ಪೆಟ್ರಾಪೋಲ್ ಗಡಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಖಿಲ ಭಾರತೀಯ ಸಂತ ಸಮಿತಿ ಬ್ಯಾನರ್ ಅಡಿಯಲ್ಲಿ ಸಾಧುಗಳು ಪ್ರತಿಭಟನೆ ನಡೆಸಿದರು.
'ಹಿಂದೂಗಳು ಮತ್ತು ದೇಗುಲಗಳ ಮೇಲಿನ ದಾಳಿ ತಡೆಗೆ ಬಾಂಗ್ಲಾ ಸರ್ಕಾರ ಕ್ರಮ ಕೈಗೊಳ್ಳುವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ' ಎಂದು ಅಖಿಲ ಭಾರತೀಯ ಸಂತ ಸಮಿತಿಯ ಬಂಗಾಳ ಘಟಕದ ಅಧ್ಯಕ್ಷ ಸ್ವಾಮಿ ಪರಮಾತ್ಮಾನಂದ ಅವರು ಹೇಳಿದರು.
ಪಶ್ಚಿಮ ಬಂಗಾಳ ಬಿಜೆಪಿ ನಾಯಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಇದೇ ವಿಚಾರವಾಗಿ ಬುಧವಾರ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಲ್ಲಿ ಹಿಂದೂ ಜಾಗರಣ್ ಮಂಚ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಆಗಸ್ಟ್ 5ರಂದು ಶೇಖ್ ಹಸೀನಾ ಅವರ ನೇತೃತ್ವದ ಸರ್ಕಾರ ಪತನವಾದ ಬಳಿಕ ಹಿಂದೂಗಳ ಮೇಲೆ 50 ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು ದಾಳಿಗಳು ನಡೆದಿವೆ.
ವಿಎಚ್‌ಪಿ ಪ್ರತಿಭಟನೆ:
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ದೆಹಲಿ ಘಟಕವು ಸೋಮವಾರ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಕಾರರು ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.
ಶಾಂತಿಪಾಲನಾ ಪಡೆ ನಿಯೋಜನೆಗೆ ಮನವಿ ಮಾಡಿ: ಮಮತಾ
ಬಾಂಗ್ಲಾದೇಶದಲ್ಲಿ ಶಾಂತಿಪಾಲನಾ ಪಡೆ ನಿಯೋಜಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು ಸೋಮವಾರ ಒತ್ತಾಯಿಸಿದರು. ವಿದೇಶದ ನೆಲದಲ್ಲಿ ಕಿರುಕುಳಕ್ಕೆ ಒಳಗಾದವರನ್ನು ವಾಪಸ್ ತವರಿಗೆ ಕರೆತರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಅವರು 'ಎರಡು ದೇಶಗಳ ನಡುವೆ ದ್ವಿಪಕ್ಷೀಯ ವಿಚಾರವಾಗಿ ಮಾತನಾಡುವುದು ನನ್ನ ವ್ಯಾಪ್ತಿ ಮೀರಿದ್ದು. ಆದರೂ ಇತ್ತೀಚಿನ ಬೆಳವಣಿಗೆಗಳು ಮತ್ತು ಜನರ ಅನುಭವದ ಮಾತಿನ ಆಧಾರದಲ್ಲಿ ಈ ಹೇಳಿಕೆ ನೀಡುತ್ತಿದ್ದೇನೆ. ಭಾರತದ ವಿದೇಶಾಂಗ ಸಚಿವಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿ. ಅಗತ್ಯಬಿದ್ದಲ್ಲಿ ವಿಶ್ವಸಂಸ್ಥೆಯ ಬಳಿಯೂ ಮಾತುಕತೆ ನಡೆಸಲಿ' ಎಂದರು.
'ವಿದೇಶಾಂಗ ವ್ಯವಹಾರಗಳ ಸಚಿವರು ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿ ವಿಚಾರವಾಗಿ ಭಾರತದ ನಿಲುವು ಏನೆಂಬುದನ್ನು ಸಂಸತ್ತಿಗೆ ತಿಳಿಸಲಿ' ಎಂದು ಆಗ್ರಹಿಸಿದರು. ಕಿರುಕುಳಕ್ಕೆ ಒಳಗಾದ ಜನರನ್ನು ವಾಪಸ್ ಕರೆತಂದು ಅವರಿಗೆ ಪುನರ್ವಸತಿ ಕಲ್ಪಿಸುವ ತುರ್ತು ಅಗತ್ಯವಿದೆ. ಇದಕ್ಕೆ ನಾವು ನಾವು ಸಿದ್ಧರಿದ್ದೇವೆ. ಅವರೊಂದಿಗೆ ಒಂದು ರೊಟ್ಟಿ ಹಂಚಿಕೊಳ್ಳಲು ನಮಗೆ ಸಮಸ್ಯೆ ಇಲ್ಲ ಎಂದು ಹೇಳಿದರು.