ತಿರುವನಂತಪುರ: ಕೇರಳದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ನೆರೆಯ ತಮಿಳುನಾಡು, ಕರ್ನಾಟಕದ ಗ್ರಾಮಗಳಲ್ಲಿ ಸುರಿಯುವ ಕ್ರಮವು, 2025ರ ಮಾರ್ಚ್ 'ಕಸಮುಕ್ತ ರಾಜ್ಯ' ಎಂದು ಘೋಷಿಸುವ ಆ ರಾಜ್ಯದ ಯತ್ನವನ್ನೇ ಅಣಕಿಸುವಂತಾಗಿದೆ.
ಜೈವಿಕ ತ್ಯಾಜ್ಯ ಸೇರಿದಂತೆ ರಾಜ್ಯದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ತಮಿಳುನಾಡಿನ ಗಡಿಯಲ್ಲಿ ಸುರಿಯಲಾಗುತ್ತಿದೆ ಎಂಬ ಬಗ್ಗೆ ವರದಿಗಳ ಕುರಿತು ತನಿಖೆಗೆ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮುಂದಾಗಿದೆ.
ಜೈವಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಸುರಿಯಲಾಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಜೈವಿಕ ತ್ಯಾಜ್ಯ ವಿಲೇವಾರಿ ಸ್ಥಾವರದ ಉಸ್ತುವಾರಿ ಹೊಂದಿರುವ ಭಾರತೀಯ ವೈದ್ಯಕೀಯ ಸಂಘದ ಕೇರಳ ಘಟಕವೂ ಒತ್ತಾಯಿಸಿದೆ.
ತಮಿಳುನಾಡು ಪೊಲೀಸ್‌ನ ತಂಡವೊಂದು ಗಡಿಭಾಗದ ಕೇರಳಕ್ಕೆ ತೆರಳಿ ಪರಿಶೀಲಿಸಿತು. ಜೈವಿಕ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಎಂಬ ವರದಿಗಳನ್ನು ಕೇರಳದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ (ಆರ್‌ಸಿಸಿ) ಮತ್ತು ಖಾಸಗಿ ಕ್ರೆಡೆನ್ಸ್ ಆಸ್ಪತ್ರೆಯು ನಿರಾಕರಿಸಿವೆ.
'ಪ್ರಜಾವಾಣಿ' ಜೊತೆಗೆ ಮಾತನಾಡಿದ ಈ ಆಸ್ಪತ್ರೆಗಳ ಪ್ರತಿನಿಧಿಗಳು, ಜೈವಿಕ ತ್ಯಾಜ್ಯಗಳನ್ನು, ಐಎಂಎ ಸ್ಥಳೀಯ ಘಟಕವು ಪಾಲಕ್ಕಾಡ್‌ನಲ್ಲಿ ನಡೆಸುತ್ತಿರುವ ಸ್ಥಾವರದ (ಇಮೇಜ್) ಮೂಲಕವೇ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರ್‌ಸಿಸಿ ನಿರ್ದೇಶಕಿ ಡಾ.ರೇಖಾ ಎ ನಾಯರ್, 'ಹಳೆ ಏಜೆನ್ಸಿಯ ವಿವರಗಳು ತಮಿಳುನಾಡು ಗ್ರಾಮಗಳಲ್ಲಿ ಪತ್ತೆಯಾಗಿವೆ. ನಾವು ಸೂಕ್ತ ರೀತಿಯಲ್ಲೇ ವಿಲೇವಾರಿ ಮಾಡುತ್ತಿದ್ದೇವೆ ಎಂದು ತಮಿಳುನಾಡಿನ ಪೊಲೀಸರಿಗೆ ಮನವರಿಕೆ ಮಾಡಲಾಗಿದೆ' ಎಂದು ತಿಳಿಸಿದರು.
'ಇಮೇಜ್'ನ ಕಾರ್ಯದರ್ಶಿ ಡಾ.ಕೃಷ್ಣಕುಮಾರ್, 'ಈ ಬಗ್ಗೆ ರಾಜ್ಯ ಆರೋಗ್ಯ ಕಾರ್ಯದರ್ಶಿ ಅವರಿಗೆ ವಿವರಣೆ ನೀಡಲಾಗದೆ. ಕೇರಳದ ತ್ಯಾಜ್ಯವನ್ನು ತಮಿಳುನಾಡು ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಸುರಿಯುವುದು ನಾಚಿಕೆಗೇಡಿನ ಕ್ರಮ' ಎಂದು ಪ್ರತಿಕ್ರಿಯಿಸಿದರು.
ಅಧಿಕೃತ ಮಾಹಿತಿ ಪ್ರಕಾರ, ಕೇರಳದಲ್ಲಿ ನಿತ್ಯ 70 ಟನ್ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಲಿದೆ. 'ಇಮೇಜ್' ಸ್ಥಾವರದ ವಿಲೇವಾರಿ ಸಾಮರ್ಥ್ಯ ಒಟ್ಟು 70 ಟನ್ ಗಳಾಗಿವೆ ಎಂದು ಗೊತ್ತಾಗಿದೆ.