ಬದಿಯಡ್ಕ: ಮುಂಡಿತ್ತಡ್ಕ ಎಸ್ ಎಂ ಎಂ ಎ ಯು ಪಿ ಶಾಲೆಯಲ್ಲಿ ರಂಗ ಸಂಗಮ ಕಾಸರಗೋಡು ಇದರ ನೇತೃತ್ವದಲ್ಲಿ ನಡೆದ 'ಚುಕ್ಕಿ' ತ್ರಿದಿನ ಸನಿವಾಸ ಶಿಬಿರ ಯಶಸ್ವಿಯಾಗಿ ಶನಿವಾರ ಸಂಪನ್ನಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾದ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮ ಉದ್ಘಾಟಿಸಿದರು. ರಂಗಸಂಗಮ ಕಾಸರಗೋಡು ನಿರ್ದೇಶಕ ಸದಾಶಿವ ಬಾಲಮಿತ್ರ ಅಧ್ಯಕ್ಷತೆ ವಹಿಸಿದ್ದರು.
ಎಸ್.ಎಂ.ಎಂ.ಎ.ಯು.ಪಿ. ಶಾಲೆ, ಮುಂಡಿತ್ತಡ್ಕ ಇದರ ನಿವೃತ್ತ ಮುಖ್ಯೋಪಾಧ್ಯಾಯ ಜನಾರ್ಧನ ಮಾಸ್ತರ್, ಶಾಲಾ ಪಿ ಟಿ ಎ ಅಧ್ಯಕ್ಷ ಅಬ್ದುಲ್ ಲತೀಫ್, ಎಂ ಪಿ ಟಿ ಎ ಅಧ್ಯಕ್ಷೆ ಶಶಿಕಲಾ ಕೆ, ಹಿರಿಯ ರಂಗಕರ್ಮಿ ರಾಮಕುಮಾರ್ ಎಂ, ಸಾಹಿತಿ, ರಂಗಕರ್ಮಿ ದಿವಾಕರ ಬಲ್ಲಾಳ್, ಶಾಲಾ ಮುಖ್ಯ ಶಿಕ್ಷಕಿ ಮಂಜುಳ ಎಂ, ವಸಂತ ಮೂಡಂಬೈಲು ಮೊದಲಾದವರು ಉಪಸ್ಥಿತರಿದ್ದರು. ಬಳಿಕ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳಿಗೆ ರಂಗ ತರಬೇತಿ, ನಕ್ಷತ್ರಗಳ ವೀಕ್ಷಣೆ, ವ್ಯಾಯಾಮ, ಆಟಗಳು, ರಂಗ ಕಾವ್ಯ, ಪಕ್ಷಿ ವೀಕ್ಷಣೆ, ರಂಗ ಗೀತೆಗಳು, ಶಿಬಿರಾಗ್ನಿ , ಯೋಗಾಸನ,ಆರೋಗ್ಯ ಮಾಹಿತಿ, ರಂಗ ಸಂಭಾಷಣೆ, ರಂಗ ಪರಿಕರಗಳ ತಯಾರಿ ಮುಂತಾದ ತರಗತಿಗಳು ಮೂರು ದಿವಸಗಳಲ್ಲಾಗಿ ನೀಡಲಾಯಿತು. ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಂಡಿತ್ತಡ್ಕ ಶಾಲಾ ವ್ಯವಸ್ಥಾಪಕ ರಘುರಾಮ್ ವಹಿಸಿದ್ದರು. ಶಿಬಿರದ ನಿರ್ದೇಶಕ ಸದಾಶಿವ ಬಾಲಮಿತ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಮೂಡಂಬೈಲು, ಕುಂಬಳೆ ಉಪಜಿಲ್ಲಾ ವಿಧ್ಯಾಧಿಕಾರಿ ಶಶಿಧರ್ ಎಂ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ, ರಂಗ ನಟರು ಹಾಗೂ ಜಿ.ಯು.ಪಿ.ಎಸ್ ಕಾಸರಗೋಡು ಶಾಲಾ ಶಿಕ್ಷಕ ರಂಜಿತ್ ಎ.ಎಸ್, ರಂಗನಟಿ ಹಾಗೂ ನಿರ್ದೇಶಕಿ ಸೌಮ್ಯ ಪಾಣಾಜೆ, ಹೇರೂರು ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಭಟ್ ಮಾತನಾಡಿದರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಜನಾರ್ಧನ ಮಾಸ್ತರ್, ಶಾಲಾ ಮುಖ್ಯ ಶಿಕ್ಷಕಿ ಮಂಜುಳ ಎಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕರು ಹಾಗೂ ಮುಂಡಿತ್ತಡ್ಕ ಶಾಲಾ ಮಕ್ಕಳಿಗೆ ಕುಂಬಳೆ ಉಪ ಜಿಲ್ಲಾ ಕಲೋತ್ಸವಕ್ಕೆ ನಾಟಕ ತರಬೇತಿ ನೀಡಿದ ಸದಾಶಿವ ಬಾಲಮಿತ್ರ ಹಾಗೂ ಮಾಸ್ಟರ್ ಆಫ್ ಫಿಸಿಯೋಥೆರಪಿ ಇನ್ ಕಾರ್ಡಿಯೋವಸ್ಕುಲರ್ ಏಂಡ್ ಪಲ್ಮನರಿ ಪರೀಕ್ಷೆಯಲ್ಲಿ, ಕಾನಚ್ಚೂರ್ ಕಾಲೇಜ್ ಆಫ್ ಫಿಸಿಯೋಥೆರಪಿಯಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಅತುಲ್ಯ ಪಿ. ಕೆ ಇವರನ್ನು ಅಭಿನಂದಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ವಿತರಿಸಲಾಯಿತು. ಪದ್ಮನಾಭ ನಾಯಕ್ ಸ್ವಾಗತಿಸಿ, ವಸಂತ ಮೂಡಂಬೈಲು ವಂದಿಸಿದರು. ಜೀವನ್ ಕುಮಾರ್ ನಿರೂಪಿಸಿದರು.