ಲಂಡನ್: ಹಣ ಅಕ್ರಮ ವರ್ಗಾವಣೆ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಅನುಮತಿ ಪ್ರಶ್ನಿಸಿ, ಶಸ್ತ್ರಾಸ್ತ ವಿತರಕ ಸಂಜಯ್ ಭಂಡಾರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಲಂಡನ್ ಹೈಕೋರ್ಟ್ ಆರಂಭಿಸಿದೆ.
ಮಂಗಳವಾರದಿಂದಲೇ ವಿಚಾರಣೆ ಆರಂಭವಾಗಿದ್ದು, 2025ರ ಜನವರಿಯಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ.
'ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ, ಭಂಡಾರಿ ಸಲ್ಲಿಸಿರುವ ಮೇಲ್ಮನವಿಯು ಪರಿಗಣನೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಪ್ರಕರಣದ ವಿಚಾರಣೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು' ಎಂದು ಭಾರತ ಸರ್ಕಾರದ ಪರ ವಾದ ಮಂಡಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್), ಪೀಠಕ್ಕೆ ಮನವಿ ಮಾಡಿತು.
'ಹಸ್ತಾಂತರ ಬಳಿಕ ಭಂಡಾರಿ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ. ಅಲ್ಲಿ ಖೈದಿಗಳು ಹಾಗೂ ಜೈಲು ಅಧಿಕಾರಿಗಳಿಂದ ಹಲ್ಲೆ ಅಥವಾ ಸುಲಿಗೆ ನಡೆಯುವ ಅಪಾಯವಿದೆ' ಎಂದು ಭಂಡಾರಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು 2022ರ ನವೆಂಬರ್‌ನಲ್ಲಿ ಅನುಮತಿ ನೀಡಿತ್ತು.