ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಅವರಿಗೆ ವಿಧಿಸಲಾಗಿರುವ ಕ್ರಿಮಿನಲ್ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಅಮೆರಿಕ ಚುನಾಯಿತ ಅಧ್ಯಕ್ಷರ ಪರ ವಕೀಲರು ನ್ಯೂಯಾರ್ಕ್‌ನ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಮ್ಯಾನ್‌ಹಟನ್ ನ್ಯಾಯಮೂರ್ತಿ ಜುವಾನ್ ಎಂ ಮೆರ್ಷಾನ್ ಅವರ ಎದುರು ಟ್ರಂಪ್ ಪರ ವಕೀಲರು ಸಲ್ಲಿಸಿರುವ ಪ್ರಮಾಣಪತ್ರ ಮಂಗಳವಾರ ಬಹಿರಂಗವಾಗಿದೆ.
'ಅಧ್ಯಕ್ಷರ ಕಚೇರಿ ಕೆಲಸಕ್ಕೆ ಸಾಂವಿಧಾನಿಕ ತೊಡಕು ಉಂಟಾಗಲಿರುವ ಕಾರಣಕ್ಕೆ ಶಿಕ್ಷೆ ಕೈಬಿಡಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿದೆ.
ತಮ್ಮ ಪುತ್ರ ಹಂಟರ್ ಬೈಡನ್ ಅವರಿಗೆ ತೆರಿಗೆ ವಂಚನೆ ಮತ್ತು ಅಕ್ರಮವಾಗಿ ಗನ್ ಹೊಂದಿದ್ದ ಪ್ರಕರಣಗಳಲ್ಲಿ ಆಗಿದ್ದ ಶಿಕ್ಷೆಗೆ ಅಧ್ಯಕ್ಷ ಜೋ ಬೈಡನ್ ಅವರೂ ಇತ್ತೀಚೆಗೆ ಕ್ಷಮಾದಾನ ನೀಡಿರುವುದನ್ನು ವಕೀಲರು ಉಲ್ಲೇಖಿಸಿದ್ದಾರೆ.
'ಸರ್ಕಾರದ ಪರ ವಕೀಲರಿಗೆ ಇದಕ್ಕೆ ಪ್ರತಿಕ್ರಿಯಿಸಲು ಡಿಸೆಂಬರ್ 9ರವರೆಗೂ ಸಮಯವಿದೆ. ಪ್ರಕರಣ ಕೈಬಿಡುವುದರ ವಿರುದ್ಧ ಹೋರಾಟ ನಡೆಸುತ್ತೇವೆ' ಎಂದು ವಕೀಲರು ಹೇಳಿದ್ದಾರೆ. ಟ್ರಂಪ್ ಅವರ 2ನೇ ಅವಧಿ ಮುಗಿಯುವ 2029ರವರೆಗೂ ಶಿಕ್ಷೆ ಜಾರಿಗೊಳಿಸುವುದನ್ನು ಮುಂದೂಡಬಹುದು ಎಂದು ಸಲಹೆ ಮಾಡಿದ್ದಾರೆ. ಇದನ್ನು ಟ್ರಂಪ್ ಅವರ ಅಟಾರ್ನಿ ಜನರಲ್ ಅವರು, 'ಅಸಂಬದ್ಧ ಸಲಹೆ' ಎಂದು ತಳ್ಳಿಹಾಕಿದ್ದಾರೆ.
ಅಧ್ಯಕ್ಷರಾಗಿ ಟ್ರಂಪ್ ಚುನಾಯಿತರಾದ ಹಿಂದೆಯೇ ನ್ಯಾಯಮೂರ್ತಿ ಮೆರ್ಚನ್ ಅವರು ಕಲಾಪವನ್ನು ಸ್ಥಗಿತಗೊಳಿಸಿದ್ದು, ಶಿಕ್ಷೆ ಪ್ರಕಟಿಸುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದರು.
ನೀಲಿಚಿತ್ರ ತಾರೆಗೆ ತಮ್ಮ ಸಂಸ್ಥೆಯಿಂದ ಹಣ ವರ್ಗಾವಣೆ ಮಾಡಿರುವುದು ಮತ್ತು ದಾಖಲೆಗಳನ್ನು ತಿರುಚಿರುವುದೂ ಸೇರಿ ಟ್ರಂಪ್ ವಿರುದ್ಧದ ಒಟ್ಟು 34 ಆರೋಪಗಳು ಸಾಬೀತಾಗಿದ್ದರಿಂದ ಅವರನ್ನು ಅಪರಾಧಿ ಎಂದು ಕೋರ್ಟ್ ಘೋಷಿಸಿತ್ತು. 'ನಾನು ತಪ್ಪು ಮಾಡಿಲ್ಲ' ಎಂದು ಟ್ರಂಪ್ ಈ ಆರೋಪಗಳನ್ನು ಅಲ್ಲಗಳೆದಿದ್ದರು.