ನ್ಯೂಯಾರ್ಕ್ : ಕೃತಕ ಬುದ್ಧಿಮತ್ತೆಯ ಉದ್ಯಮ ಓಪನ್‌ಎಐನ ಮಾಜಿ ಉದ್ಯೋಗಿ, ಭಾರತೀಯ ಮೂಲದ 26 ವರ್ಷದ ಸುಚಿರ್ ಬಾಲಾಜಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ನ.26ರಂದು ಸುಚಿರ್ ಅವರ ಶವ ಸ್ಯಾನ್‌ಫ್ರಾನ್ಸಿಸ್ಕೊದ ಬ್ಯುಕನನ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ.
'ಸುಚಿರ್ ಅವರದು ಆತ್ಮಹತ್ಯೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಗಿದೆ. ಸಾವಿನ ಹಿಂದೆ ದುಷ್ಕೃತ್ಯ ಇರುವ ಕುರಿತು ಸದ್ಯಕ್ಕೆ ಯಾವುದೇ ಸಾಕ್ಷ್ಯ ಇಲ್ಲ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಾಟ್‌ಜಿಪಿಟಿ ಅಭಿವೃದ್ಧಿ ಪಡಿಸುವಾಗ ಅಮೆರಿಕದ ಹಕ್ಕುಸ್ವಾಮ್ಯ ಕಾನೂನನ್ನು ಓಪನ್‌ಎಐ ಉಲ್ಲಂಘಿಸಿದೆ ಎಂದು ಮೂರು ತಿಂಗಳ ಹಿಂದೆ ಸುಚಿರ್ ಬಾಲಾಜಿ ಬಹಿರಂಗವಾಗಿ ಆರೋಪಿಸಿ, 'ವಿಷನ್ ಬ್ಲೋವರ್' ಎನಿಸಿದ್ದರು.
'ಚಾಟ್‌ಜಿಪಿಟಿ'ನಲ್ಲಿ ಬಳಸಲಾಗುವ 'ಜಿಪಿಟಿ4' ಪ್ರೋಗ್ರಾಂ ಅಭಿವೃದ್ಧಿಗೆ ಶ್ರಮಿಸಿದ ತಂಡದಲ್ಲಿ ಸುಚಿರ್ ಕೂಡ ಇದ್ದರು. ಈ ಕೃತಕಬುದ್ಧಿಮತ್ತೆ ತಂತ್ರಜ್ಞಾನ ಕುರಿತು ಅವರು ಟೈಮ್ಸ್ ನಿಯತಕಾಲಿಕಕ್ಕೆ ಅಕ್ಟೋಬರ್‌ನಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
'ಚಾಟ್‌ಜಿಪಿಟಿ ಅಭಿವೃದ್ಧಿಪಡಿಸಲು ಉದ್ಯಮ ಹಾಗೂ ಉದ್ಯಮಿಗಳ ಮಾಹಿತಿಯನ್ನು ಬಳಸಿಕೊಳ್ಳುವ ಮೂಲಕ ಒಪನ್‌ಎಐ ಹಾನಿ ಉಂಟು ಮಾಡುತ್ತಿದೆ' ಎಂದು ಅಕ್ಟೋಬರ್ 23ರಂದು ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಸುಚಿರ್ ಹೇಳಿದ್ದರು.
ತಮ್ಮ ತಂತ್ರಜ್ಞಾನ ಸಮಾಜಕ್ಕೆ ಒಳಿತಾಗುವುದಕ್ಕಿಂತ ಹೆಚ್ಚಾಗಿ ಕೆಡಕಾಗುತ್ತದೆ ಎಂದು ಭಾವಿಸಿದ್ದ ಅವರು, ನಂತರ ಓಪನ್‌ಎಐ ಅನ್ನು ತ್ಯಜಿಸಿದ್ದರು.