ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ತಮ್ಮ ಭೇಟಿಯ ವೇಳೆ ದಿಸ್ಸನಾಯಕ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ರೀಲಂಕಾ ಸಂಪುಟದ ವಕ್ತಾರ ನಲಿಂದಾ ಜಯತಿಸ್ಸ ತಿಳಿಸಿದ್ದಾರೆ.
ದಿಸ್ಸನಾಯಕ ಅವರೊಂದಿಗೆ ವಿದೇಶಾಂಗ ಸಚಿವ ವಿಜಿತಾ ಹೇರಾತ್ ಮತ್ತು ಹಣಕಾಸು ಖಾತೆ ಉಪ ಸಚಿವ ಅನಿಲ್ ಜಯಂತ ಫರ್ನಾಂಡೋ ಅವರು ಆಗಮಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 15 ರಿಂದ 17ರವರೆಗೆ ದಿಸ್ಸನಾಯಕ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ಮೊದಲ ವಿದೇಶಿ ಭೇಟಿ ಇದಾಗಿದೆ.
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ನಂತರ ದಿಸ್ಸನಾಯಕ ಅವರನ್ನು ಭೇಟಿ ಮಾಡಿದ್ದ ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ದೆಹಲಿಗೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದರು.