ನವದೆಹಲಿ: ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಅವರ ಅಂತ್ಯಕ್ರಿಯೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಗುರುವಾರ ನೆರವೇರಿತು.
ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಹುಸೇನ್ (73) ಸೋಮವಾರ ನಿಧನರಾಗಿದ್ದರು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸ್ಯಾನ್ ಫ್ರಾನ್ಸಿಸ್ಕೊದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಸ್ಯಾನ್ ಫ್ರಾನ್ಸಿಸ್ಕೊದ ಫೆರ್ನ್‌ವುಡ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಖ್ಯಾತ ಡ್ರಮ್ಮರ್ ಎ.ಶಿವಮಣಿ ಮತ್ತು ಇತರ ಕಲಾವಿದರು ಸ್ಮಶಾನದ ಅಲ್ಪ ದೂರದಲ್ಲಿ ಡ್ರಮ್ ಬಾರಿಸುವ ಮೂಲಕ ತಬಲಾ ಮಾಂತ್ರಿಕನಿಗೆ ಅಂತಿಮ ಗೌರವ ಸಲ್ಲಿಸಿದರು. ಜಾಕಿರ್ ಅವರ ನೂರಾರು ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಜಾಕಿರ್ ಅವರ ಅಂತಿಮ ದರ್ಶನ ಪಡೆಯಲು ಅಮೆರಿಕಕ್ಕೆ ತೆರಳುವುದಾಗಿ ಶಿವಮಣಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ನಾಲ್ಕು ಗ್ರ್ಯಾಮಿ ಪುರಸ್ಕಾರಗಳನ್ನು ಪಡೆದಿರುವ ಹುಸೇನ್ ಅವರಿಗೆ ಪತ್ನಿ ಆಂಟೋನಿಯಾ ಮಿನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಇದ್ದಾರೆ.